ಅನುದಿನ ಕವನ-೯೯೭, ಕವಿ: ಮಲ್ಲಿಕಾರ್ಜುನಗೌಡ ತೂಲಹಳ್ಳಿ, ದಾವಣಗೆರೆ

ಚಿಕ್ಕವರಿದ್ದಾಗ
ಭೂಗೋಳದ ಮೇಷ್ಟ್ರು
ಭೂಪಟ ನೇತು
ದ್ವೀಪಗಳ ತೋರಿದ್ದರು

ಮೂರು ಕಡೆ ನೀರು
ಒಂದು ಕಡೆ ಭೂಮಿಗೆ
ದ್ವೀಪ ಅಂದಿದ್ದರು

ಈಗ ಜೊತೆಗಿದ್ದೇವೆ
ದ್ವೀಪದಂತೆ
ನೀರೂ ಇಲ್ಲ
ಜೋರೂ ಇಲ್ಲ

ಸಲಿಗೆಯಿಲ್ಲದ ಸಂಗ
ಗಂಭೀರ ಮುಖ ಚಹರೆ
ಖಂಡಿತ ಅಣಕಿಸುತ್ತವೆ
ನಮ್ಮನು ನಾವು
ನೋಡಿಕೊಂಡರೆ

ಈ ಹುಸಿಗಳ ಹೊದೆಯುವುದಕ್ಕೆ ಮುನ್ನ ವಚನಗಳು ಏಕವಾಗಿದ್ದರೂ
ಮಾತುಕತೆ ಬಹುವಾಗಿದ್ದವು
ಎದೆಗಳು ಚೆಂದ ಬೆಸೆದಿದ್ದವು

ಮನುಷ್ಯ ಬೆಳೆದಂತೆ
ಸೋಗಲಾಡಿಯಾದಂತೆ
ಭಾಷೆಗೆ ಭಾವ ದಕ್ಕಲಾರದು
ಅನುಭವದ ಕೊಳ ಒಣಗುತ್ತದಷ್ಟೇ

-ಮಲ್ಲಿಕಾರ್ಜುನಗೌಡ ತೂಲಹಳ್ಳಿ, ದಾವಣಗೆರೆ
—–