ನನ್ನ ಅರಿವಿನ ಪ್ರವಾದಿ
ಮಹಮದರೆಂಬ ಪ್ರವಾದಿ
ಎಮ್ಮೊಲವಿನ ನೀತಿಯ ಹಾದಿ,
ಅಲ್ಲಾಹನ ಅರಿಯದ ಈ ಮತಿಗೆ
ಅರಿವ ನೀಡವ ಹಿರಿದೊಂದಿ.
ಅವರ ಬಾಳದು, ಒಲವು ನಿಲುವದು
ಮಮತೆಯ ಬೆಚ್ಚಗಿನಚ್ಚರಿ.
ಜಗದ ವ್ಯವಹಾರ ಆಗೆ ಬುಡಮೇಲು
ನಿಜದ ತಕ್ಕಡಿ ಹಿಡಿದ ವ್ಯಾಪಾರಿ
ಅಂಗಳದಲಿ ತಾವನಾಥರಾದರೂ
ಅಧೀರ ಅನಾಥರಿಗೆಲ್ಲಾ ನಾಥರು
ಅದೆನಿತೋ ಅನುಕಂಪ ಅವರೆದೆ ಗೂಡಲಿ
ಅನುರಾಗಿ ಅನಂತದ ಕಾರುಣ್ಯದಲಿ.
ಅಂತಃಕಲಹದ ಅರಬ್ಬರಲ್ಲಿ
ಅಭಯದ ಅಗ್ರಜರಿವರಲ್ತೇ?
ಅಜ್ಞಾನದ ಆರಾಧನೆಯನು ತೊಡೆದು
ಅನುಗ್ರಹಿತ ಮಾರ್ಗ ತೋರಿದರಂತೆ.
ಧರ್ಮವೆಂದರದು ದಾರಿಯೆಂದಿರಿ
ತಾವೇ ಆಲಿಸಿದ ದೀಪವಾದಿರಿ
ಧಿಕ್ಕರಿಸುವ ಅಗ್ನಿಪರೀಕ್ಷೆಗಳಲಿ
ಧೃತಿಗೆಡದಂತ ಬೆಳಕೆ ಆದಿರಿ
ಕಿರುಕುಳವಿಟ್ಟ ಎಲ್ಲಾ ಪೆಟ್ಟುಗಳ
ಮೆಟ್ಟಲುಗಳಾಗಿಸಿ ಹತ್ತಿ ಹೋದಿರಿ
ಏರುತೇರುತ ಆತುಕೊಂಡವರ
ಹೊತ್ತು ನಡೆಯುತ ತಾಯಿ ಆದಿರಿ.
ಮಗುವ ಹಸಿವನು ಬಲ್ಲ ತಾಯಂತೆ
ಹಂಚಿ ಉಣ್ಣುವುದ ನಮಗೆ ಕಲಿಸಿದಿರಿ
ಗಳಿಸಿದ ಲೋಭದಿಂದೊಳಗೆ ಕೊಳೆಸದೆ
ಪರಮ ಉದಾರದಿ ದಾನ ಕೊಡಿಸಿದಿರಿ.
ಭುಜಕ್ಕೆ ಭುಜ ಕೊಟ್ಟು ಭುವಿಯ ಜನರೆಲ್ಲ
ಬಂಧುಗಳಾದರು ಬಂಧಮುಕ್ತರು
ತುಳಿಯದೆ ಯಾರನು ನಿರಹಂಕಾರದಿ
ತಬ್ಬಿಕೊಳ್ಳಲು ಕಲಿಸಿದ ಕರುಣಿ.
ಬೇನೆ ಬವಣೆಗಳ ಕ್ರೂರ ಹಣತೆಯಲಿ
ಬೆಳಗಿದಂತ ಆ ಬೆಳಕು ನಿಮ್ಮಲಿ
ಕುರುಡು ಪಥಿಕರ ಮದದ ರಥಿಕರ
ಕಣ್ತೆರೆಸಲಿ ಆ ಮಹಾಂತ ಬದುಕು
ಕೊನೆಯ ಮಾತಲೂ ಕೊನರಿತು ಕರುಣೆ
ಕೊಲೆಗಡುಕರಿಗೂ ದೊರೆಯಿತು ಕ್ಷಮೆ
ಮನ್ನಿಸಿದ ಮಮತೆಯ ಆ ಮಡಿಲಲ್ಲಿ
ಮುಂದಿನ ಪೀಳಿಗೆ ಶಾಂತಿ ಹೊಂದಲಿ.
ಸರಳ ವಿರಳದ ನಿರ್ಮಲ ಬಾಳದು
ನಿರಮ್ಮಳಗೊಳಿಸಲಿ ನಮ್ಮಿರುವ
ಅವರೆದೆ ಆಶಯ ನಮ್ಮೆದೆಗಿಳಿಯಲಿ
ಹಸನಗೊಳ್ಳಲೀ ಮನ ಜಗದಲ್ಲಿ.
ಮಹಮದರೆಂಬ ಪ್ರವಾದಿ
ಎಮ್ಮೊಲವಿನ ನೀತಿಯ ಹಾದಿ,
ಅಲ್ಲಾಹನ ಅರಿಯದ ಈ ಮತಿಗೆ
ಅರಿವ ನೀಡವ ಹಿರಿದೊಂದಿ.
-ಯೋಗೀಶ್ ಮಾಸ್ಟರ್, ಬೆಂಗಳೂರು
—–