ಬಳ್ಳಾರಿ: ಅಭಿವೃದ್ಧಿ ಹೊಂದಿದ ಶಾಲೆಗಳಲ್ಲಿ ಒಂದಾಗಿರುವ ತಾಲೂಕಿನ ಗಡಿಗ್ರಾಮ ರಾಯಪುರದ ಸಹಿಪ್ರಾ ಶಾಲೆ ಈ ಬಾರಿಯ ಗೋವಿಂದೇಗೌಡರ ಪ್ರಶಸ್ತಿ ಗೆ ನಾಮಕರಣಗೊಂಡಿದೆ ಎಂದು ಸಿ ಆರ್ ಪಿ ವೃಷಬೇಂದ್ರ ಅವರು ಹೇಳಿದರು.
ರಾಯಪುರ ಶಾಲೆಯ ಮುಖ್ಯೋಪಾಧ್ಯಾಯಿನಿ ಜಿ.ಪಿ ಶೇಕನ್ ಬೀ ಅವರು ವಯೋ ನಿವೃತ್ತಿಯ ಹಿನ್ನಲೆಯಲ್ಲಿ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಉತ್ತಮ ಪರಿಸರದಲ್ಲಿ ನಿರ್ಮಾಣವಾಗಿರುವ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುವ ಅವಕಾಶವಿರುವ ಶಿಕ್ಷಕರದು ಸೌಭಾಗ್ಯವೇ ಸರಿ ಎಂದು ಅಭಿಪ್ರಾಯಪಟ್ಟರು.
ಶಾಲೆ ಬಗ್ಗೆ ಅತೀವ ಕಾಳಜಿಯನ್ನು ಮುಖ್ಯ ಗುರು ಶೇಕನ್ ಬೀಅವರು ಹೊಂದಿದ್ದರು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಭೂದಾನಿ, ಶಿಕ್ಷಣ ಪ್ರೇಮಿ ಶಂಕುತಲರೆಡ್ಡಿ ಅವರು ಮಾತನಾಡಿ, ನನ್ನ ದೃಷ್ಟಿಯಲ್ಲಿ ನಿವೃತ್ತಿ ಇಲ್ಲ. ಪ್ರತಿ ದಿನ , ಪ್ರತಿಕ್ಷಣವೂ ಹೊಸತನ. ಪ್ರಬುದ್ಧತೆ ನಿವೃತ್ತಿ ಬಳಿಕ ಬರುತ್ತದೆ ಎಂದರು.
ದೇವರ ಧ್ಯಾನವನ್ನು ಪ್ರೀತಿಯ ಕಣ್ಣಿಂದ ನೋಡುವುದೇ ನಿವೃತ್ತಿ ನಂತರದ ಜೀವನ ಎಂದು ವ್ಯಾಖ್ಯಾನಿಸಿದರು.
ಭಾರತದ ಸಂವಿಧಾನ ಮಹಿಳೆಯರಿಗೆ ಸ್ವಾತಂತ್ರ್ಯ ನೀಡಿದೆ. ಈ ಹಿನ್ನಲೆಯಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ತಮ್ಮತನ, ಪ್ರತಿಭೆ ಮೆರೆಯುತ್ತಿದ್ದಾರೆ. ಮನುಸ್ಮೃತಿಯಲ್ಲಿ ಮಹಿಳೆಯರಿಗೆ ಸ್ವಾತಂತ್ರ್ಯ ವಿರಲಿಲ್ಲ. ಬಂಧನ ಇತ್ತು ಎಂದು ಅಭಿಪ್ರಾಯ ಪಟ್ಟರು.
ಉದ್ಯೋಗ ಮಾಡುವ ಮಹಿಳೆಯರಿಗೆ ತಮ್ಮದೇ ಆದ
ಸಮಯವಿರುವುದಿಲ್ಲ. ನಿವೃತ್ತಿ ಬಳಿಕ ಮಹಿಳೆಯರು
ತಮ್ಮ ಸಮಯವನ್ನು ವಿನಿಯೋಗಿಸಿಕೊಳ್ಳಿ. ನಿವೃತ್ತಿ ಬಳಿಕವೂ ಶಾಲೆಗೆ ಬಂದು ಹಿಂದಿ ಕಲಿಸಿ ಕೊಡಿ ಎಂದು ಶೇಕನ್‌ಬೀ ಅವರಲ್ಲಿ ಮನವಿ ಮಾಡಿದರು.
ಗುಲ್ಬರ್ಗಾ ವಿಶ್ವವಿದ್ಯಾಲಯದ ಮಾಜಿ ಸೆನೆಟ್ ಸದಸ್ಯ, ಹಿರಿಯ ಪತ್ರಕರ್ತ ಸಿ.ಮಂಜುನಾಥ್ ಅವರು ಮಾತನಾಡಿ ರಾಯಪುರ ಶಾಲೆಗೆ ಭೂದಾನ ಮಾಡಿದ ಶ್ರೀಮತಿ ಶಕುಂತಲಾ ರೆಡ್ಡಿ ಮತ್ತು ಕೊಪ್ಪಳ ಜಿಲ್ಲೆಯ ಕುಣಿಕೇರಿ ಗ್ರಾಮದ ಶಾಲೆಗೆ ಭೂದಾನ ಮಾಡಿದ ಹುಚ್ಚವ್ವ ಅವರು ಸಮಾಜಕ್ಕೆ ಆದರ್ಶವಾಗಿದ್ದಾರೆ ಎಂದು ಶ್ಲಾಘಿಸಿದರು.
ಶಿಕ್ಷಕ ವೃತ್ತಿ ಪವಿತ್ರವಾದದ್ದು, ಮೂರು ದಶಕಗಳ ಕಾಲ ಶಿಕ್ಷಕರಾಗಿ ಉತ್ತಮ ಸೇವೆ ಸಲ್ಲಿಸಿದ ಶೇಕನ್ ಬೀ ಅವರ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.
ಶೇಕನ್ ಬೀ ಮಾತನಾಡಿ, ಮೂವತ್ತು ವರ್ಷಗಳ ಹಿಂದೆ ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದ್ದರಿಂದ ದೂರದ ಗ್ರಾಮಗಳಿಗೆ ಲಾರಿ ಹತ್ತಿ ಶಾಲೆಗೆ ಹೋಗಿ ಬರುತ್ತಿದ್ದೆ ಎಂದು ಸ್ಮರಿಸಿದರು.
ಸಮಯ ಸಿಕ್ಕಾಗ ಖಂಡಿತಾ ರಾಯಪುರ ಶಾಲೆಗೆ ಬಂದು ಪಾಠ ಮಾಡುತ್ತೇನೆ. ಮಕ್ಕಳಿಗೆ ಹಿಂದಿ ಕಲಿಸುವೆನು ಎಂದು ಭರವಸೆ ನೀಡಿದರು.
ಮೂವತ್ತು ವರ್ಷಗಳ ಸೇವೆ ಸಲ್ಲಿಸಲು ಕುಟುಂಬದ ಸದಸ್ಯರು, ಸಹೋದ್ಯೋಗಿಗಳ ಸಹಕಾರ ಇತ್ತು ಎಂದರು.
ಅಧ್ಯಾಪಕ ಎನ್ ಎಲ್ ಕುಬೇರ್ ಮಾತನಾಡಿ, ರಾಯಪುರದಲ್ಲಿ 27 ಶಾಲೆಯ ಮಕ್ಕಳು ಭಾಗವಹಿಸಿದ ಪ್ರತಿಭಾ ಕಾರಂಜಿ ಯಶಸ್ವಿಯಾಗುವಲ್ಲಿ ಶೇಕನ್ ಬೀ ಅವರ ಪಾತ್ರ ಹಿರಿದಾಗಿತ್ತು. ಶಾಲಾ ದಾಖಲೆಗಳನ್ನು ನಿರ್ವಹಿಸುವುದನ್ನು ಸಹೋದ್ಯೋಗಿಗಳಿಗೆ ಕಲಿಸಿದ್ದಾರೆ ಎಂದು ಹೇಳಿದರು. ವೇದಿಕೆಯಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷೆ ಶಿವಗಂಗಾ ಅವರ ಪತಿ ಆರ್ ಬಸವನಗೌಡ, ರೂಪನಗುಡಿ ಸಹಿಪ್ರಾ ಶಾಲೆ ಮುಖ್ಯಗುರು ಸುಜಾತ, ಕಮ್ಮರಚೇಡು ಸಹಿಪ್ರಾ ಶಾಲೆ ಮುಖ್ಯಗುರು ವಿಜಯಲಕ್ಷ್ಮಿ, ಹಲಕುಂದಿ ಸಕಿಪ್ರಾ ಶಾಲೆಯ ಹಿರಿಯ ಶಿಕ್ಷಕಿ ಮೀನಾಕ್ಷಿ ಕಾಳೆ, ಕುಂಟನಾಳ್ ಸಹಿಪ್ರಾ ಶಾಲೆಯ ಮುಖ್ಯಗುರು ಮಾರೇಶ್, ಭೈರಪ್ಪ, ಶೇಕನ್ ಬೀ ಅವರ ಪತಿ ಹಿರಿಯ ನ್ಯಾಯವಾದಿ ಪೀರ್ ಮಹಮ್ಮದ್, ಶಾಲೆಯ ಅತಿಥಿ ಶಿಕ್ಷಕರಾದ ಶಿವರಾಜ್, ವೀರೇಶ್, ಬಸವರಾಜ್, ರಿಹಾನಾ, ಕುಟುಂಬದ ಸದಸ್ಯರು ಸೇರಿದಂತೆ ಗ್ರಾಮದ ಗಣ್ಯರು ಉಪಸ್ಥಿತರಿದ್ದರು. ಗಣ್ಯರು, ಶಾಲಾ ಶಿಕ್ಷಕರು, ಬಂಧು ಮಿತ್ರರು, ವಿದ್ಯಾರ್ಥಿಗಳು ಶೇಕನ್ ಬೀ ದಂಪತಿಯನ್ನು ಸತ್ಕರಿಸಿ ಗೌರವಿಸಿದರು. ವಿಶೇಷವೆಂದರೆ ೫ನೇತರಗತಿ ಮಕ್ಕಳು ತಮ್ಮ ಮೆಚ್ಚಿನ ಗುರುಮಾತೆಗೆ ಸೀರೆ ನೀಡಿದ್ದು, ಮತ್ತೊಂದು ತರಗತಿಯ ವಿದ್ಯಾರ್ಥಿಗಳು ಕೇಕ್ ಕತ್ತರಿಸಿ ಸಂಭ್ರಮಿಸಿದ್ದು ಗಮನ ಸೆಳೆಯಿತು.
ಶಿಕ್ಷಕ ಮಲ್ಲಪ್ಪ ಸ್ವಾಗತಿಸಿದರು. ಸಹ ಶಿಕ್ಷಕ ಬಾಬಾಪೀರ ನಿರೂಪಿಸಿದರು. .8ನೇ ತರಗತಿ ವಿದ್ಯಾರ್ಥಿನಿ ಮಾಲಿನ್ಯ ಮತ್ತು ಸಂಗಡಿಗರು ಪ್ರಾರ್ಥಿಸಿದರು.
*****