ಗಜಲ್
ದುಃಖದ ಕಡಲು ತುಂಬಿ ಬಂದರೂ ನಾನು ಬಿಕ್ಕಲಾರೆ
ಅರ್ಧರಾತ್ರಿ ತೊರೆದು ಹೋದರೂ ನಾನು ಬಿಕ್ಕಲಾರೆ
ನಕ್ಷತ್ರ ಪುಂಜದಲಿ ಕಳೆದುಹೋದನು ಬಾನ ಚಂದಿರ
ಬಯಲ ತುಂಬ ಕತ್ತಲಾವರಿಸಿದರೂ ನಾನು ಬಿಕ್ಕಲಾರೆ
ನೋವು ನುಂಗಿಕೊಂಡು ನೆನಪಿನಲಿ ಕಾಲ ದೂಡುವೆ
ಕಡುಕಷ್ಟಗಳು ನನ್ನೆದೆಗಪ್ಪಳಿಸಿದರೂ ನಾನು ಬಿಕ್ಕಲಾರೆ
ಅದೆಷ್ಟೋ ಒಲವಿನ ಹೂಗಳು ಅರಳದೆ ಬಾಡಿದವು
ಎದೆಗಡಲು ಕಂಪನಗೊಂಡರೂ ನಾನು ಬಿಕ್ಕಲಾರೆ
ಮೌನದ ತಂಬೂರಿಯಲಿ ಕಮರಿದ ಆಲಾಪಗಳು
ಸುಟ್ಟ ಗಾಯದಲಿ ರಕ್ತ ಬಸಿದರೂ ನಾನು ಬಿಕ್ಕಲಾರೆ
ಬೆಳದಿಂಗಳು ತೋರಿಸಿ ಕತ್ತಲೆಯಲಿ ಕೈಬಿಟ್ಟು ಹೋದೆ
ಬಾಳ ದಾರಿಯಲಿ ದೀಪ ಆರಿದರೂ ನಾನು ಬಿಕ್ಕಲಾರೆ
ಹೂಮಳೆ ನೆಪದಲಿ ಕಣ್ಣೀರು ಸುರಿಸಿದ ಮಹಾದೇವ
ಕೊನೆಗೆ ಶವದ ಯಾತ್ರೆಯಾದರೂ ನಾನುಬಿಕ್ಕಲಾರೆ
-ಮಹಾದೇವ ಎಸ್ ಪಾಟೀಲ
ರಾಯಚೂರು.
****