ಗೆಳೆತನದ ಸವಿನೆನಪು
ಗೆಳೆಯರೆ ಜೀವನದ ಒಡನಾಡಿಗಳೆ
ನಮ್ಮ ಒಲವು ಒಡನಾಟಗಳ ನೆನೆಯೋಣ ಬನ್ನಿ
ನಮ್ಮ ಬದುಕು ಸಾಧನೆಗಳ ಸವಿಯೋಣ ಬನ್ನಿ
ಓಡಿ ಆಡಿದೆವು ನಾವಿಲ್ಲೆ ಕೂತು ಮಾತಾಡಿದೆವು ಇದೇ ಮರದ ನೆರಳಲ್ಲಿ
ಹುಣಸೇಕಾಯಿ ಚೀಪಿದ್ದು ಬಿಕ್ಕೆ ನೇರಲೆಗೆ ಜಗಳಾಡಿದ್ದು ಇದೇ ಬಯಲಲ್ಲಿ
ಜೊತೆ ಚಪ್ಪಲಿ ಒಂದೇ ಜೊತೆ ಬಟ್ಟೆಯಲ್ಲೇ ವರ್ಷವಿಡೀ ಶಾಲೆ ಕಲಿತೆವು
ಪೆನ್ನು ಪೆನ್ಸಿಲ್ಲು ಸ್ಕೇಲು ನೋಟ್ ಬುಕ್ ಹಂಚಿಕೊಂಡು ಬರೆದು ಪಾಸಾದೆವು
ತಪ್ಪದ ಪೀಟಿ ಪೀರಿಯಡ್ಡು ಗಣಿತ ಮೇಷ್ಟ್ರು ಭಯಂಕರ ಬಡಿತದ ಶಿಕ್ಷೆ
ಗ್ರಾಮರ್ ಅರಿಯದ ರೂಮರ್ರಗೆ ಒಳಗಾಗದ ನಮ್ಮ ಸಜ್ಜನಿಕೆ ಶ್ರೀರಕ್ಷೆ
ಗೆಳೆಯರೆ ಸವಿ ನೆನಪುಗಳ ಸಮ್ಮಿಲನ
ನಮ್ಮೆಲ್ಲರ ಓದಿನ ದಿನಗಳ ಅನುರಣನ
ನೆನೆಯೋಣ ಬನ್ನಿ ಸವಿಯೋಣ ಬನ್ನಿ
ಇದ್ದೂರು ಆ ಊರು ನೆರೆ ಊರು ಎಲ್ಲೆಲ್ಲಿಂದಲೋ ಬಂದು ಸೇರಿದೆವು
ನಾ ಯಾರೋ ನೀವ್ ಯಾರೋ ಮರೆಯದೇ ಇಂದೂ ಉಳಿದಿಹೆವು
ಲೆಕ್ಕವಿರಲಿ ಹೋಂ ವರ್ಕೆ ಇರಲಿ ನೀವ್ ಸಹಾಯ ಮಾಡಿದ್ದೆ ನಿಜ ನೆನಪು
ಹಾಡಿನಲಿ ನಾಟಕ ಕುಣಿತದಲಿ ನಿಮ್ಮ ಸ್ಪೂರ್ತಿ ಒತ್ತಾಸೆ ಇಂದೂ ಪುಳಕ
ಖೋಖೋ ಕಬಡ್ಡಿ ರನ್ನಿಂಗ್ ರಿಲೇ ಆಟೋಟಗಳ ಗೆಲುವ ಉಲ್ಲಾಸ
ಟೆಸ್ಟ್ ಪರೀಕ್ಷೆಗೆ ರಾತ್ರಿಯಿಡೀ ಓದಿ ಬರೆದು ಹೆಚ್ಚೆಚ್ಚು ಅಂಕಗಳ ಪಡೆದ ಉತ್ಸಾಹ
ಗೆಳೆಯರೆ ಮನದ ಮಾತುಗಳ ಮಂಥನ
ನಮ್ಮೆಲ್ಲರ ಇಷ್ಟ ಕಷ್ಟಗಳ ಸಿಹಿ ಸಿಂಚನ
ಎರಚೋಣ ಬನ್ನಿ ಹಂಚೋಣ ಬನ್ನಿ
ಹಬ್ಬಗಳು ಜಾತ್ರೆ ಉತ್ಸವಗಳಲಿ ಜಿಗಿದಾಟ ಕಾದಾಟ ಕಣ್ಣೋಟ ಮಾಟಗಳು
ರಜೆಗಳಲ್ಲಿ ತೋಪು ಬೆಟ್ಟ ಕಣಿವೆಗಳಲ್ಲಿ ಕುರಿ ದನಗಳ ಜೊತೆಯಾಟಗಳು
ಹತ್ತಿ ಬಿಡಿಸಿ ಜೋಳ ಮುರಿಸಿ ನೆಲ್ಲು ಈರುಳ್ಳಿ ಸೋಸಿ ಕಾಸು ಕೂಡಿಸಿದ್ದು
ಶಾಲಾ ಪ್ರವಾಸ ಸಂಚಾರ ಸಿನೆಮಾಕ್ಕೆಂದು ಹುರಿಗೊಂಡು ಕಾದು ಕನಸಿದ್ದು
ಇಷ್ಟದ ಹೀರೋ ಹೀರೋಯಿನ್ ಪೋಟೊಗಳ ಕೊಂಡು ಎದೆಯಲ್ಲೆ ಇಟ್ಟದ್ದು
ಕಷ್ಟದ ಬದುಕೆಲ್ಲ ನಿಮ್ಮ ಮಾತು ಹಾಡು ತರಲೆಗಳಲ್ಲಿ ತೇಲಿ ಹೋದದ್ದು
ಗೆಳೆಯರೆ ನೆನೆದಷ್ಟು ಅಕ್ಷಯದ ಬುತ್ತಿ
ನಮ್ಮ ನಿಮ್ಮ ಜೊತೆಯಾದ ಸ್ನೇಹ ಶಕ್ತಿ
ಸೇರಿ ಹಾಡೋಣ ಬನ್ನಿ ಕುಣಿಯೋಣ ಬನ್ನಿ
ಕಿರಾಣಿ ಅಂಗಡಿ ಮಂಡಿ ಸಂತೆಗಳಲಿ ದುಡಿದು ಮನೆ ನಡೆಸುತ ಓದಿದೆವು
ಅಣ್ಣ ಅಕ್ಕ ತಂಗಿ ತಮ್ಮಂದಿರ ಆಡಿಸುತ್ತ ಓದಿಸುತ್ತಾ ಕೈ ಹಿಡಿದು ಮುನ್ನಡೆಸಿದೆವು
ಅಪ್ಪ ಅಮ್ಮ ಅಜ್ಜ ಅಜ್ಜಿಯರ ನೋವು ನಲಿವುಗಳಲ್ಲಿ ಒಂದಾಗಿ ಬೆಳೆದೆವು
ಮೇಷ್ಟ್ರು ಮೇಡಂಗಳ ಪಾಠ ನೀತಿ ನಡತೆಗಳ ಆದರ್ಶಗಳ ಮೈಗೂಡಿಸಿಕೊಂಡೆವು
ಒಂದಷ್ಟು ಹಟ ಕೆಟ್ಟ ಚಟ ಸಿಟ್ಟು ಸೆಡವು ಅಹಂಕಾರ ಜಬರಿಕೆಗಳ ಕಿತ್ತೆಸೆದೆವು
ಕೈಗೆ ಕೈಯಾಗಿ ಮೈಗೆ ಮೈಯಾಗಿ ಸ್ನೇಹಕೋಟೆಯಲ್ಲಿ ಒಂದಾಗಿ ನಲಿದಿಹೆವು
ಕಷ್ಟ ಸುಖಗಳಲಿ ಒಂದಾದ ಜೀವಗಳಿವು
ಸೋಲು ಗೆಲುವುಗಳ ಕಂಡಂತ ಮನಗಳಿವು
ಮತ್ತೆ ನೆನಪ ದೋಣಿಯಲ್ಲಿ ಜೀಕೋಣ ಬನ್ನಿ
ನಿಮ್ಮ ಮನೆಯ ಮುದ್ದೆ ಬಸ್ಸಾರು ನಮ್ಮ ಮನೆ ರೊಟ್ಟಿ ಉಚ್ಚೆಳ್ಳು ಚಟ್ನಿ ಮೊಸರು
ಅವರ ಮನೆ ನಾಟಿಕೋಳಿ ಸಾರು ಇವರ ಮನೆ ಪುಳಿಯೋಗ್ರೆ ಚಿತ್ರನ್ನ ಮೊಸರನ್ನ
ಚಕ್ಕುಲಿ ಕೋಡ್ಬಳೆ ನಿಪ್ಪಟ್ಟು ಉಂಡೆ ಜಿಲೇಬಿ ಜಾಮೂನು ಮೈಸೂರ್ ಪಾಕು
ಪರಸ್ಪರ ಹಂಚಿಕೊಂಡು ತಿಂದು ತಿನಿಸುತ್ತ ಬೆಳೆದದ್ದನ್ನೆಲ್ಲ ಮರೆಯಲುಂಟೆ
ನಮ್ಮ ಗೆಳೆತನದ ಸಿರಿತನದ ಜೀವನದ ಸಿಹಿ ನೆನಪುಗಳು ಮಾಸಲುಂಟೆ
ವಯಸ್ಸೆಷ್ಟೇ ಆಗಿರಲಿ ಶಾಲೆ ಕಾಲೇಜು ಜೀವನದ ಸೊಗಸು ಮತ್ತೆ ಬರುವುದುಂಟೆ
ಗೆಳೆಯರೇ ಟೀನೇಜಿನ ಟೆಂಪರ್ ದಿನಗಳು
ಈ ಏಜಿಗೆ ಲಗ್ಜುರಿ ತಂದಂತ ಗೋಲ್ಡನ್ ಡೇಸ್ಗಳು
ಬಿಪಿಯಿರದೆ ಹ್ಯಾಪಿಯಲಿ ಸವಿಯೋಣ ಬನ್ನಿ
-ಟಿ.ಪಿ.ಉಮೇಶ್, ಹೊಳಲ್ಕೆರೆ .ತಾ. ಚಿತ್ರದುರ್ಗ.ಜಿ.
*****