ಬಳ್ಳಾರಿ, ಅ.12: ಸರಕಾರಿ ಪದವಿ ಕಾಲೇಜಿನ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಸೇರಿದಂತೆ ಪ್ರಮುಖ ಐದು ಬೇಡಿಕೆಗಳನ್ನು ಈಡೇರಿಸ ಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ಗುರುವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ರಾಜ್ಯ ಘಟಕದ ಗೌರವಾಧ್ಯಕ್ಷರೂ ಆಗಿರುವ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಟಿ. ದುರುಗಪ್ಪ ಅವರ ನೇತೃತ್ವದಲ್ಲಿ ಒಂದು ದಿನದ ಸಾಂಕೇತಿಕ ಪ್ರತಿಭಟನೆ ಹಮ್ಮಿಕೊಂಡಿದ್ದರು.
ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ನೇಮಕಗೊಂಡ ತಿಂಗಳಿಂದ ೧೨ ತಿಂಗಳುಗಳ ವೇತನವನ್ನು ಆಯಾ ತಿಂಗಳ ೫ನೇ ತಾರೀಖಿನ ಒಳಗಾಗಿ ಬಟವಾಡೆ ಮಾಡಬೇಕು ಎಂದು ಪ್ರತಿಭಟನಾಕಾರರು ಸರಕಾರವನ್ನು ಒತ್ತಾಯಿಸಿದರು. ಆರೋಗ್ಯ ಏರುಪೇರಾಗಿ ಸಾವನ್ನಪ್ಪಿದ ಅತಿಥಿ ಉಪನ್ಯಾಸಕರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಒದಗಿಸಬೇಕು. ಅತಿಥಿ ಉಪನ್ಯಾಸಕರ ಹೆಸರಿನಲ್ಲಿ ಫ್ರಾವಿಡೆಂಟ್ ಫಂಡ್, ಇ.ಎಸ್.ಐ. ಕ್ರಮಕೈಗೊಳ್ಳಬೇಕು, ಹಣಕಾಸು ಇಲಾಖೆಯ ವಿಳಂಬ ನೀತಿಯಿಂದಾಗಿ ಸಂಬಳನಿರಂತರವಾಗಿ ವಿಳಂಬವಾಗುತ್ತಿದ್ದು, ಇದನ್ನು ಆದಷ್ಟು ಬೇಗನೆ ಸುಧಾರಿಸಬೇಕು ಮತ್ತು ಯುಜಿಸಿ ನಿಯಮಾವಳಿಯಂತೆ ಗೌರವಧನವನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಡಾ. ದುರುಗಪ್ಪ ಮಾತನಾಡಿ, ರಾಜ್ಯದ ಪಕ್ಕದ ಆಂಧ್ರಪ್ರದೇಶದ, ತೆಲಂಗಾಣ, ತಮಿಳುನಾಡು, ದೆಹಲಿ, ಪಶ್ಚಿಮ ಬಂಗಾಳ ಮುಂತಾದ ರಾಜ್ಯಗಳಲ್ಲಿ ಅತಿಥಿ ಉಪನ್ಯಾಸಕರಿಗೆ ಅಲ್ಲಿನ ಸರ್ಕಾರಗಳು ಸೇವಾ ಭದ್ರತೆಯನ್ನು ನೀಡಿ ಖಾಯಂ ಮಾಡಿರುವಂತೆ ಕರ್ನಾಟಕದಲ್ಲೂ ಕ್ರಮಜರುಗಿಸಬೇಕು. ವಿಧಾನಸಭೆಯ ಪ್ರತಿಪಕ್ಷ ನಾಯಕರಾಗಿದ್ದಾಗ ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸಲು ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಪ್ರಸ್ತುತ ನಮ್ಮನ್ನು ಖಾಯಂಗೊಳಿಸ ಬೇಕು ಎಂದರು.
ಅತಿಥಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿರುವವಲ್ಲಿ ಬಹುಪಾಲು ಜನರು ಅಲ್ಪಸಂಖ್ಯಾತ, ಹಿಂದುಳಿದ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರೇ ಹೆಚ್ಚಾಗಿದ್ದಾರೆ ಹಾಗೂ ಬಡ ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುತ್ತಿದ್ದಾರೆ. ಅತಿಥಿ ಉಪನ್ಯಾಸಕರ ಭವಿಷ್ಯವನ್ನು ಉಜ್ವಲಗೊಳಿಸಿದಲ್ಲಿ ನಾಡಿನ ವಿದ್ಯಾರ್ಥಿಗಳ ಭವಿಷ್ಯವೂ ಉಜ್ವಲವಾಗುವುದು ಎಂದು ಹೇಳಿದರು.
೧೨ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರ ಜೀವನಕ್ಕೆ ಸೂಕ್ತ ಭದ್ರತೆ ಒದಗಿಸ ಬೇಕು. ಕಳೆದ ಆಗಸ್ಟ್ ತಿಂಗಳಲ್ಲಿ ಕಾರ್ಯನಿರ್ವಹಿಸಿದ ಅತಿಥಿ ಉಪನ್ಯಾಸಕರ ಗೌರವಧನವನ್ನು ಶೀಘ್ರ ಬಿಡುಗಡೆ ಮಾಡಬೇಕು ಎಂದು ಡಾ.ದುರ್ಗಪ್ಪ ಒತ್ತಾಯಿಸಿದರು.
ಕಾಲೇಜ್ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಅತಿಥಿ ಉಪನ್ಯಾಸಕರ ಹಿತಾಸಕ್ತಿ ವಿರುದ್ಧ ನೀಡುವ ಅವೈಜ್ಞಾನಿಕ ಹೇಳಿಕೆಗಳ ವಿರುದ್ಧವೂ ಪ್ರತಿಭಟನಾಕಾರರು ಕಿಡಿಕಾರಿದರು.
ಪ್ರತಿಟನೆಯಲ್ಲಿ ಸಂಘದ ಉಪಾಧ್ಯಕ್ಷ ಡಾ.ಹೆಚ್.ಹನುಮೇಶ್, ಜಿಲ್ಲಾ ಮುಖಂಡರಾದ
ಡಾ.ಕೆ. ಬಸಪ್ಪ, ರುದ್ರಮುನಿ, ಡಿ.ಸಿದ್ದೇಶ್, ಜಿಲ್ಲಾ ಕಾರ್ಯದರ್ಶಿ, ರಮೇಶ್ ಎಸ್.ಎಂ,ಗೋವಿಂದಪ್ಪ, ಗುರುರಾಜ್,ಪ್ರಭಾವತಿ, ಶುಭಾಜೋತಿ, ಸುಜಾತ, ನವೀನಕುಮಾರಿ,ಸರಿತ ಮತ್ತಿತರರು ಭಾಗವಹಿಸಿದ್ದರು. *****