ಅನುದಿನ ಕವನ-೧೦೧೭, ಕವಿ: ಡಾ.ಲಕ್ಷ್ಮಣ ವಿ ಎ, ಬೆಂಗಳೂರು, ಕವನದ ಶೀರ್ಷಿಕೆ: ಕಂದೀಲು

ಕಂದೀಲು

ಸೀಮೆ ಎಣ್ಣೆಯ ಬುಡ್ಡಿ
ದೀಪದ ಯುಗ ಕಳೆದು ಎಷ್ಟೋ
ದಿನಗಳ ಮೇಲೆ ಮನೆ ಮನೆಯೊಳಗೆ
ಕಂದೀಲುಗಳು ಕಾಲಿಟ್ಟು ಬಲು ಸಾವಧಾನದಲಿ
ನಡೆಯುತ್ತ  ಬಂದಂತಿದ್ದವು

ಹೊತ್ತು ಮುಳುಗುವ ಹೊತ್ತಿಗೆ
ಸರಿಯಾಗಿ
ಮನೆಯ ಗಿಳಿ ಮೂತಿ  ಗೂಟಿನಿಂದ ಹಗೂರ ಕೆಳಗಿಳಿಸಿ
ಅದರ ತಗಡಿನ  ಕರಿ ತಲೆ ಎತ್ತಿ
ನಿನ್ನೆಯ ಇರುಳು ಮೆತ್ತಿದ
ಮಸಿ ಒರೆಸಲು
ಅದರ  ನಾಜೂಕ ಗಾಜಿನ  ಹರಿತ  ತುದಿ ತಾಗದಂತೆ  ಎಚ್ಚರದಲಿ  ಹಳೆಯ ಚಿಂದಿ  ಅರಿವೆಯ ಬೆರಳುಗಳ  ಒಳ ತೂರಿಸಿ ಫಳ
ಫಳ ಹೊಳೆಯುವ ತನಕ ತಿಕ್ಕಿ ತೀಡಿ

ಕಳೆದ ರಾತ್ರಿ
ಸುಟ್ಟ ಬತ್ತಿಯ ಕುಡಿ ಚಿಗುಟಿ
ಸಮ ಸಮದಲಿ  ಚಿಗುರಿಸಿ ಮತ್ತೆ
ಯಥಾವತ್  ಕಂದೀಲಿನ  ಕರಿ ನೆತ್ತಿಯ ಎತ್ತಿ
ಹೊಳೆವ ಅದರ  ಆತ್ಮದಷ್ಟೇ
ನಾಜೂಕಾದ ಗಾಜು ಗೊಳೆವೆಯ  ಇಳಿಸಿ

ಕಡ್ಡಿ ಗೀರಿ ಕುಳಿತರೆ
ಅದರ ಸುತ್ತ ಮುತ್ತ

ತೆರೆದ ಪುಸ್ತಕದೊಳಗೆ ಕಣ್ಣು ತೆರೆವ  ಇತಿಹಾಸದ ಸಣ್ಣ ಹೊರಳು
ಕೋಟೆ  ಕೊತ್ತಲು  ಉಪ್ಪಲೀ ಬರುಜು ಬಾರಾ ಕಮಾನಿನ  ಕ್ಷೀಣ ನೆರಳು
ಬೆಳಗು ಬೆಳಕಿನ  ತರಗತಿಯೊಳಗೆ ಮೇಷ್ಟ್ರು  ಓದಿದ ಅದೇ ಪಠ್ಯ ಕಥನ
ಈಗ ಅರೆ ಬರೆ ಬೆಳಕಿನಲಿ
ಕನಸಿನಲಿ ನಡೆವಂತೆ ತಾಳೀಕೋಟೆ ಕದನ

ಇಂತಹ ಕಂದೀಲು ಒಮ್ಮೊಮ್ಮೆ
ಜೋಡು ಎತ್ತಿನ ಬಂಡಿಯ ಹಿಂದೆ
ತೂಗುತ್ತ
ವಾರದ  ಸಂತೆಗೆ ಹೋಗಿ
ತೆರಳುವಾಗ ಹುಸಿ  ಭಯ ಬೆರಗಿನಲಿ  ಕಣ್ಣು ಮುಚ್ಚಿಕೊಂಡು  ಜೋಕಾಲಿ ಜೀಕುತ್ತ
ಎತ್ತಿನ ಕೊರಳ  ಗಿಲ್ಲು ಘಿಲುಕ  ಸರದ
ಸ್ವರ  ಲಯದಲಿ  ಬಲು ಮಜಕೂರಿನಲಿ ಓಲಾಡುತ್ತ

ಮತ್ತೆ
ಮರಳುವಾಗ ಕಾರಿರುಳಿನ ದಾರಿಯ  ಕಣ್ಣಾಗಿ
ಚಿಂದಿ ನಿದ್ರೆಯ ಕನಸಿನಲಿ
ತೂಕಡಿಸುತ್ತ  ಮನೆಗೆ ಬಂದು  ನೊಗ ಕಳಚಿದರೆ
ಆಕಾಶದಿಂದ ಮೆಲ್ಲ ಮೆಲ್ಲನೇ
ಇಳಿದ ಬೆಳದಿಂಗಳವೀಗ ಮನೆಯ ಅಂಗಳ

-ಡಾ.ಲಕ್ಷ್ಮಣ ವಿ ಎ, ಬೆಂಗಳೂರು

(ಕಂದೀಲು ಚಿತ್ರಕೃಪೆ: ಶ್ರೀ ಟಿ.ಎಫ್. ಹಾದಿಮನಿ)