“ಇಲ್ಲಿವೆ ನಗುವಿನ ಮೇಲಿನ ಐದು ಹನಿಗವಿತೆಗಳು. ನಗೆಯ ಧರ್ಮ, ಮರ್ಮ, ಕರ್ಮ ಬಿಂಬಿಸುವ ಭಾವಪ್ರಣತೆಗಳು. ನಗು ಮುಖವ ಬೆಳಗುವ ಹಣತೆಯಷ್ಟೆ ಅಲ್ಲ. ಬದುಕಿನ ಹಾದಿಗೆ ಬೆಳಕಿನ ಒರತೆಯೂ ಹೌದು” ಅಂತಾರೆ ಕವಿ ಎ.ಎನ್.ರಮೇಶ್. ಗುಬ್ಬಿ ಅವರು!
1. ಅಸಾಧ್ಯ..!
ನೀ ಜಗವ ಯಾಮಾರಿಸಬಹುದು
ಮೊಗದಿ ಮೆಲು ನಗೆಯ ನಕ್ಕು..
ನನ್ನ ಕಂಗಳೆದುರು ಮುಚ್ಚಿಡಲಾಗದು
ನಿನ್ನೆದೆಯ ನೋವಿನ ಬಿಕ್ಕು..!
2. ತೆರೆ..!
ನಿಮ್ಮೆದೆಯ ತಲ್ಲಣಗಳಿಗೆ
ಹೊದಿಸಿಬಿಡಿ ಮೊಗದ
ಮುಗುಳ್ನಗೆಯ ಹೊದಿಕೆ.!
ತೊಡಿಸಬೇಕೇಕೆ ಪರರಿಗೆ
ನಮ್ಮೊಳಗಣ ನೋವಿನ
ಬೇಗುದಿ ಬವಣೆಗಳ ಕುಣಿಕೆ.!
3. ಮರ್ಮ..!
ನಗುನಗುತ್ತಿದ್ದೇನೆಂದರೆ..
ನೋವುಗಳಿಲ್ಲವೆಂದಲ್ಲ.!
ಅಳುತ ನರಳುವುದಕಿಂತ
ನಕ್ಕು ಅರಳುವುದೆ ಲೇಸೆಂದು.!
ಬದುಕಲೇಬೇಕೆಂದ ಮೇಲೆ
ಬರುವುದೆಲ್ಲವನು ನಗುತ
ಎದುರಿಸುವುದೆ ಸಲೀಸೆಂದು.!
4. ಸಂಜೀವಿನಿ.!
ಎಷ್ಟಿದ್ದರೇನು ಒಳಗೆ
ನಿರಾಸೆ ನರಳಿಕೆ ಬಿಗು..
ಮೊಗದಲಿರಲಿ ನಗು.!
ಮುಗುಳ್ನಗೆಯ ಕಿರಣ
ಮಾಡೀತು ಲೋಕದ
ನೋವುಗಳ ಹರಣ..
ಸುಗಮ ಗೊಳಿಸೀತು
ಬದುಕಿನ ಚಾರಣ.!
5. ನಗೆಯ ಬಗೆ.!
ಸುತ್ತಣ ಹಗೆಯಿರಲಿ
ಕಾಡುವ ಧಗೆಯಿರಲಿ
ಬಾಡದಿರಲಿ ಮುಗುಳ್ನಗೆ.!
ಸೋಲಿಗೂ ಸಾವಿಗೂ
ಭೂಷಣದಂತಿರಬೇಕು
ಮೊಗದ ಮೇಲಿನ ನಗೆ.!
ಬಂದಾಗುವಂತಿರಬೇಕು
ಇರಿವವರ ನಂಜುನಾಲಿಗೆ.!
-ಎ.ಎನ್.ರಮೇಶ್. ಗುಬ್ಬಿ.