ಅನುದಿನ ಕವನ-೧೦೨೧, ಕವಿ: ಎಂ.ವಿ. ಶಶಿಭೂಷಣ ರಾಜು, ಪೆನ್ಸಿಲ್ವೇನಿಯ, ಅಮೆರಿಕ, ಕವನದ ಶೀರ್ಷಿಕೆ: ಇಳಿಸು ಮನದ ಭಾರವ ನೀನು

ಇಳಿಸು ಮನದ ಭಾರವ ನೀನು

ಇಳಿಸು ಮನದ ಭಾರವ ನೀನು, ಕನಸು ಕಾಣಲು ಕಣ್ಣು
ಹಾರಾಡು ಬಾನಾಡಿ ತೇಲಿದಂತೆ

ಬಾಳಹಾದಿಗೆ ಗಾಳಿ ತೇಲಿಬರುವುದು ಹೀಗೆ, ನೋವೋ, ನಲಿವೋ ಹೊತ್ತುಕೊಂಡು
ಬಾಳಹಾಡನು ಹಾಡು ನಗುನಗುತ ಸ್ವೀಕರಿಸಿ, ಬಾಳಭಾವವ ಹಾಗೆ ಅರಿತುಕೊಂಡು

ಸುತ್ತಲೂ ಸುಳಿವುದು ಮತ್ತದೇ ಕಾಲ, ಗತಕಾಲ ನೆನಪನು ಮುಖಕೆ ತಂದು
ವರ್ತಮಾನವ ಹೊತ್ತು, ಮುಂಬರುವ ಕಾಲಕೆ ಓಡು ನೀ ನಿನ್ನ ಗುರಿಯ ನೆನೆದು

ಹತ್ತು ಮುಖಗಳು ಎರಗಿ ಹತ್ತಾರು ಕಡೆಯಿಂದ, ಹೀಗೆಳೆಯುವುದ ನೀ ತಡೆಯಲಾರೆ
ಎತ್ತರಕೆ ಏರುತಿರೆ ಸಾಸಿರ ಕಣ್ಣು ಅಚ್ಚರಿಯ ಬೀರುವುದ ನೀ ಮರೆಯಲಾರೆ

ಹೇಗೆ ಮರೆಯುವೆ ನೀನು ಗತಕಾಲದನುಭವವ, ಆಳವಾಗಿ ಊರಿರುವ ಬೇರುಗಳ
ವಿಶ್ವವನೆಲ್ಲ ಸುತ್ತಿ ಸೂರ್ಯ ಚಂದ್ರರ ಮುಟ್ಟಿದರೂ ಮರೆಯಲಾಗುವುದೇ ಹಳೆಯ ಊರುಗಳ

ಆಗಸದಲಿ ಹಾರಾಡಿ, ಗಿರಿಗಳ ತಲೆ ಮೆಟ್ಟಿದರೂ, ಇರುವುದೊಂದೇ ಧರೆ ಕೆಳಗಿಳಿಯಲು
ಹೇಗೆಲ್ಲಾ ಸುತ್ತಾಡಿ, ಎಲ್ಲೆಲ್ಲಾ ತಿರುಗಿದರೂ ಇರುವುದೊಂದೇ ಸೂರು ಬಳಿ ಸರಿಯಲು

ಪ್ರೀತಿಯೊಂದನು ಹೊಸೆದು ಜೀವದೊಂದಿಗೆ ಬೆಸೆದು ಹಗುರಾಗಿ ಹರಿದಾಡು ಹರುಷದಿಂದ
ನೆನ್ನೆ ನಾಳೆಯ ಮರೆತು, ಇಂದಿನಲಿ ಬೆರೆತು, ಬೆರೆಗಾಗಿ ನೆರವಾಗು ನಲುಮೆಯಿಂದ


-ಎಂ.ವಿ. ಶಶಿಭೂಷಣ ರಾಜು, ಪೆನ್ಸಿಲ್ವೇನಿಯ, ಅಮೆರಿಕ.    ಚಿತ್ರಕೃಪೆ(ಬಾನಾಡಿ ಹಕ್ಕಿ): ಸಿದ್ಧರಾಮ ಕೂಡ್ಲಿಗಿ
—–