ಅನುದಿನ‌ ಕವನ-೧೦೨೨, ಕವಿ: ಮನಂ, ಬೆಂಗಳೂರು, ಕವನದ ಶೀರ್ಷಿಕೆ: ಏನೂ ಇಲ್ಲದ ಕಡೆಯಿಂದ

ಏನೂ ಇಲ್ಲದ ಕಡೆಯಿಂದ

ಏನೂ ಇಲ್ಲದ ಕಡೆಯಿಂದ ಬಂದು
ಏನೂ ಇಲ್ಲದ ಕಡೆಗೆ ನಡೆಯುವಾಗಲೂ
ಬೇಕೇಕೆ ಏನೂ ಇಲ್ಲವೆಂಬಂತ ಬಾಳು?

ಕತ್ತಲ ಲೋಕದಿಂದ ಕಡೆದು ಬಂದು
ಕತ್ತಲ ಲೋಕದ ಎಡೆಗೆ ನಡೆಯುವಾಗಲೂ
ಬೇಕೇಕೆ ಬೆಳಕು ಇಲ್ಲವೆಂಬಂತ ಬಾಳು?

ಕೈಕಾಲು ನಡೆಯದ ಬದುಕಿನಿಂದ ಬಂದು
ಕೈಕಾಲು ಆಡದ ಕಡೆಗೆ ನಡೆಯುವಾಗಲೂ
ಬೇಕೇಕೆ ಕೈಕಾಲು ನಡೆಯದ ಆಡದ ಬಾಳು?

ಮೌನವ ತುಂಬಿಕೊಂಡು ಉದಯಿಸಿ ಬಂದು
ಚಿರಮೌನಕ್ಕೆ ಜಾರುವ ಮೊದಲೂ
ಬೇಕೇಕೆ ಮೌನವ ಹೊದ್ದುಕೊಂಡ ಬಾಳು?

ಪರಿಚಿತರಿಲ್ಲದ ಅಪರಿಚಿತರ ಭುವಿಗೆ ಬಂದು
ಪರಿಚಿತರಿಲ್ಲದ ಅಪರಿಚಿತರ ಲೋಕಕ್ಕೆ ಜಾರಿಕೊಳ್ಳುವ ಮೊದಲೂ
ಬೇಕೆೇಕೆ ಪರಿಚಿತರ ಮಾಡಿಕೊಳ್ಳದ ಬಾಳು?


– ಮನಂ, ಬೆಂಗಳೂರು
—–