ಡೊಳ್ಳು ಕುಣಿತ ಮತ್ತು ಕಂಸಾಳೆ ಕನ್ನಡನಾಡಿನ ಅಸ್ಮಿತೆ – ಜಾನಪದ ಸಂಘಟಕ ಡಾ.ಅಶ್ವರಾಮು

ಬಳ್ಳಾರಿ, ಅ.19: ಕನ್ನಡನಾಡಿನ ಜಾನಪದ ಕಲೆ, ಸಂಸ್ಕೃತಿ ದೇಶದಲ್ಲಿಯೇ ಅತ್ಯಂತ ಶ್ರೀಮಂತವಾಗಿದೆ ಎಂದು ಶ್ರೀ ಸತ್ಯಂ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ, ಜಾನಪದ ಸಂಘಟಕ ಡಾ.ಅಶ್ವರಾಮು ಅವರು ಹೇಳಿದರು.
ಎಂ.ಬಸಾಪುರದ ರಂಗ ನೇಸರ ಸಾಂಸ್ಕೃತಿಕ ಕಲಾ ಸಂಘ ಮತ್ತು ಶ್ರೀ ಸತ್ಯಂ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದಲ್ಲಿ ಹಮ್ಮಿಕೊಂಡಿರುವ ಹದಿನೈದು ದಿನಗಳ ಜಾನಪದ ಗೀತೆಗಳು ಮತ್ತು ಜಾನಪದ ನೃತ್ಯ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭವನ್ನು ಡೊಳ್ಳು ಬಾರಿಸುವುದರ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಕನ್ನಡ ಜಾನಪದ ಸಂಸ್ಕೃತಿಯ ಭಾಗವಾದ ಡೊಳ್ಳು ಕುಣಿತ ಮತ್ತು ಕಂಸಾಳೆ ಕನ್ನಡನಾಡಿನ ಅಸ್ಮಿತೆ ಎಂದು ಕೊಂಡಾಡಿದರು.
ಅಳಿವಿನಂಚಿನಲ್ಲಿರುವ ಜಾನಪದ ಕಲೆಗಳನ್ನು ಮತ್ತೇ ಮುಖ್ಯವಾಹಿನಿಗೆ ತರುವ ಜವಾಬ್ದಾರಿ ವಿದ್ಯಾರ್ಥಿ-ಯುವ ಸಮೂಹದ ಮೇಲಿದೆ. ಈ ನಿಟ್ಟಿನಲ್ಲಿ ರಂಗನೇಸರ ಸಂಸ್ಥೆಯ ಸಹಯೋಗದಲ್ಲಿ ನಮ್ಮ ಕಾಲೇಜಿನ ಪ್ರಶಿಕ್ಷಣಾರ್ಥಿಗಳಿಗೆ ತರಬೇತಿ ನೀಡಲು ನಮ್ಮ ಆಡಳಿತ ಮಂಡಳಿ ಮುಂದಾಗಿದೆ ಎಂದರು.

ಡೊಳ್ಳು‌ಕುಣಿತ ತರಬೇತಿ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷರೂ ಆಗಿರುವ ಹಿರಿಯ ಪತ್ರಕರ್ತ ಸಿ.ಮಂಜುನಾಥ್ ಅವರು ಮಾತನಾಡಿ, ಜನಪದ ಕಲೆಗಳಲ್ಲಿ ಗಂಡುಕಲೆ ಎನಿಸಿರುವ ಡೊಳ್ಳು ಕುಣಿತ ಪುರುಷರಿಗೆ ಮೀಸಲಾಗಿದ್ದರೂ ನಾಡಿನ ಮಹಿಳೆಯರು ಡೊಳ್ಳು ‌ಕುಣಿತವನ್ನು ಶ್ರದ್ಧಾಪೂರ್ವಕವಾಗಿ ಕಲಿತು ದೇಶ ವಿದೇಶಗಳಲ್ಲಿ ಪ್ರದರ್ಶಿಸಿ ನಾಡಿಗೆ‌ ಕೀರ್ತಿ ತಂದಿದ್ದಾರೆ ಎಂದರು.
ಬೀರದೇವರಿಗೆ ಪ್ರಿಯವಾದ ಡೊಳ್ಳು ಹಳ್ಳಿಯ ಸಂಸ್ಕೃತಿ ಜೀವನದೊಂದಿಗೆ ಸಮರಸವಾಗಿ ಬೆರೆತುಕೊಂಡಿದೆ ಎಂದು ತಿಳಿಸಿದರು.
ಡೊಳ್ಳುಕುಣಿತ ಕಲೆ ನಾಡಿಗೆ ಹಲವಾರು ಹೆಮ್ಮೆಯ ಕಲಾವಿದರನ್ನು ನೀಡಿದೆ. ಅವಿಭಜಿತ ಬಳ್ಳಾರಿ ಜಿಲ್ಲೆಯ ಸೊನ್ನದ ಪ್ರಸಿದ್ಧ ಡೊಳ್ಳು ಕಲಾವಿದ ಹಮ್ಮಿಗೆ ಮುದಿಮಲ್ಲಪ್ಪ ಅವರನ್ನ ಸ್ಮರಿಸಿದರು.
ರಂಗ ನೇಸರ ಸಂಸ್ಥೆ ಪ್ರಾಥಮಿಕ ಶಾಲಾ ಮಕ್ಕಳು ಸೇರಿದಂತೆ ಎಲ್ಲಾ ವಯೋಮಾನದವರಿಗೆ ಡೊಳ್ಳು‌ಕುಣಿತ ಸೇರಿದಂತೆ ಜಾನಪದದ ವಿವಿಧ ಪ್ರಕಾರಗಳ ಕಲೆಗಳನ್ನು ತರಬೇತಿ ನೀಡುತ್ತಿರುವುದು ಅಭಿನಂದನಾರ್ಹ ಎಂದರು.
ಕಾಲೇಜಿನ ಹಿರಿಯ ಉಪನ್ಯಾಸಕ ಅಲಂ ಭಾಷ ಅವರು ಮಾತನಾಡಿದರು.                                  ಕಾರ್ಯಕ್ರಮದಲ್ಲಿ ಕಾಲೇಜಿನ ಹಿರಿಯ ಉಪನ್ಯಾಸಕ ಜಯದೇವಯ್ಯ, ಉಪನ್ಯಾಸಕರುಗಳಾದ ಚಂದ್ರಶೇಖರ ಆರ್. ಗಿರಿಜಾ, ನಾಗೇಶ್ ಬಾಬು, ಶ್ರೀಕಾಂತ್ ಮುನಿ,

ಕಂಸಾಳೆ ತರಬೇತಿದಾರ ಮಾರೆಣ್ಣ, ಜನಪದ ಗೀತೆಗಳ ತರಬೇತಿದಾರ ಬಿ.ದೊಡ್ಡಬಸಪ್ಪ,   ಡೊಳ್ಳು ತರಬೇತಿದಾರ ಚಂದ್ರಶೇಖರ ಬಸಾಪುರ , ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು.
ವಿದ್ಯಾರ್ಥಿನಿ ಶಭಾನ ಪ್ರಾರ್ಥಿಸಿದರು.ವೀರಮ್ಮ ಸ್ವಾಗತಿಸಿದರು. ಕೆ.ಹೇಮೇಶ್ವರ ನಿರೂಪಿಸಿದರು. ಮಾನಪ್ಪ ವಂದಿಸಿದರು.
——