ಕರ್ತವ್ಯ ಪಾಲನೆಯಲ್ಲಿ ಮಡಿದ ಹುತಾತ್ಮರ ಪ್ರಾಣತ್ಯಾಗ ಸ್ಮರಿಸುವುದು ಆದ್ಯ ಕರ್ತವ್ಯ -ಐಜಿಪಿ ಬಿ.ಎಸ್.ಲೋಕೇಶ್ ಕುಮಾರ್

ಬಳ್ಳಾರಿ,ಅ.21: ಕರ್ತವ್ಯ ಮಾಡುತ್ತಲೇ ಪ್ರಾಣತ್ಯಾಗ ಮಾಡಿದ ಎಲ್ಲಾ ಸಮವಸ್ತ್ರಧಾರಿ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಬಳ್ಳಾರಿ ವಲಯ ಪೊಲೀಸ್ ಮಹಾ ನಿರೀಕ್ಷಕ ಬಿ.ಎಸ್.ಲೋಕೇಶ್ ಕುಮಾರ್ ಅವರು ಹೇಳಿದರು.
ಜಿಲ್ಲಾ ಪೊಲೀಸ್ ವತಿಯಿಂದ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೇಶ ಮತ್ತು ರಾಜ್ಯದ ಕರ್ತವ್ಯ ಪಾಲನೆಯಲ್ಲಿ ಪ್ರಾಣತ್ಯಾಗ ಮಾಡಿದ ಮಹನೀಯರನ್ನು ನಾವೆಲ್ಲರೂ ಸ್ಮರಿಸಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಮಾತನಾಡಿ, ಸಮಾಜದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಪಡೆಯ ಕಾರ್ಯ ನಿಜಕ್ಕೂ ಶ್ಲಾಘನೀಯ. ನಿಸ್ವಾರ್ಥ ಸೇವೆಯಲ್ಲಿ ಕಳೆದು ಹೋದ ಜೀವಗಳನ್ನು ಸ್ಮರಿಸುತ್ತಾ, ನೋವು-ದುಃಖ ಅನುಭವಿಸಿದ ಅವರ ಕುಟುಂಬಗಳನ್ನು ಮರೆಯಬಾರದು ಎಂದರು.
ಪೊಲೀಸ್ ಪಡೆಗೆ ಬೆಂಬಲ ನೀಡುವ ಮೂಲಕ ಸಬಲೀಕರಣಗೊಳಿಸಬೇಕು. ಪೊಲೀಸ್ ಮತ್ತು ಸಮುದಾಯದ ನಡುವೆ ನಿಕಟ ಸಂಬಂಧ ಹೊಂದಿಕೊಂಡು, ಪರಸ್ಪರ ನಂಬಿಕೆಯ ಮೂಲಕ ಉತ್ತಮ ಮತ್ತು ಸುರಕ್ಷಿತ ನಾಳೆಗಾಗಿ ನಾವೆಲ್ಲರೂ ಸಹಕರಿಸೋಣ ಎಂದು ತಿಳಿಸಿದರು.


ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಅವರು ಮಾತನಾಡಿ, 1959 ರ ಅ.21ರಂದು ಸಿಆರ್‍ಪಿಎಫ್ ನ ಡಿವೈಎಸ್‍ಪಿ ಕರಣ್ ಸಿಂಗ್ ಅವರ ನೇತೃತ್ವದಲ್ಲಿ ಒಂದು ಸಿಆರ್‍ಪಿಎಫ್ ತುಕಡಿ ಲಡಾಕ್ ಪ್ರದೇಶದಲ್ಲಿರುವ ಹಾಟ್ ಸ್ಟ್ರಿಂಗ್ ಹತ್ತಿರ ಗಸ್ತು ನಡೆಸುತ್ತಿರುವಾಗ, ಚೈನಾ ದೇಶದ ಸೈನಿಕರು ಸುಸಜ್ಜಿತ ಮದ್ದುಗುಂಡುಗಳು ಮತ್ತು ಆಯುಧಗಳನ್ನು ಹೊಂದಿ, ಹೆಚ್ಚಿನ ಸಂಖ್ಯೆಯಲ್ಲಿ ದಾಳಿ ಮಾಡಿದ್ದರು. ಭಾರತದ ಜವಾನರು ಧೈರ್ಯ ಮತ್ತು ಸಾಹಸದಿಂದ ಚೈನಾ ದೇಶದ ಸೈನಿಕರೊಂದಿಗೆ ಹೋರಾಡಿದರು. ಹೋರಾಟದಲ್ಲಿ 10 ಮಂದಿ ಸಿ.ಆರ್.ಪಿ.ಎಫ್ ಜವಾನರು ವೀರ ಮರಣ ಹೊಂದಿದರು ಹಾಗೂ 9 ಮಂದಿಯನ್ನು ಚೈನಾ ದೇಶದ ಸೈನಿಕರು ದಸ್ತಗಿರಿ ಮಾಡಿದ್ದರು ಎಂದು ಘಟನೆ ವಿವರಿಸಿದರು.
ಸಿಆರ್‍ಪಿಎಫ್ ಜವಾನರ ಧೈರ್ಯ, ಸಾಹಸ ಹಾಗೂ ಆತ್ಮ ಸಮರ್ಪಣೆಯನ್ನು ಭಾರತ ದೇಶದ ಎಲ್ಲಾ ಪ್ರಜೆಗಳು ಇಂದಿಗೂ ಸ್ಮರಿಸುತ್ತಾರೆ. ಅವರ ಸವಿನೆನಪಿಗಾಗಿ ಒಂದು ಸ್ಮಾರಕವನ್ನೂ ಸಹ ನಿರ್ಮಿಸಲಾಗಿದೆ. ವೀರ ಮರಣವನ್ನು ಅಪ್ಪಿದ ಎಲ್ಲಾ ಸಮವಸ್ತ್ರಧಾರಿ ಅಧಿಕಾರಿ ಮತ್ತು ಸಿಬ್ಬಂದಿಗಳ ನೆನಪು ಹಾಗೂ ಶಾಂತಿಗಾಗಿ ದೇಶಾದ್ಯಂತ ಅ.21ರಂದು ಪೊಲೀಸ್ ಹುತಾತ್ಮರ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತಿದೆ ಎಂದರು.
2022-23 ನೇ ಸಾಲಿನಲ್ಲಿ ಇಡೀ ಭಾರತ ದೇಶದಲ್ಲಿ ಮರಣ ಹೊಂದಿದ ಒಟ್ಟು 189 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರಲ್ಲಿ ಕರ್ನಾಟಕ ರಾಜ್ಯದ 16 ಜನ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರೂ ಸಹ ಕರ್ತವ್ಯ ಪಾಲನೆಯಲ್ಲಿ ಮರಣ ಹೊಂದಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗಣ್ಯರೆಲ್ಲರೂ ಹುತಾತ್ಮರ ಸ್ಮಾರಕಕ್ಕೆ ಪುಷ್ಪ ಗುಚ್ಛ ಅರ್ಪಿಸಿದರು. ಹುತಾತ್ಮರ ಗೌರವ ಸೂಚಕವಾಗಿ ಮೂರು ಸಾರಿ ಕುಶಾಲುತೋಪು ಹಾರಿಸುವ ಮೂಲಕ ಸಂತಾಪ ಸೂಚಿಸಿದರು.


ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಸೂರ್ಯವಂಶಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಪಿ.ರವಿಕುಮಾರ್, ಲೋಕಾಯುಕ್ತ ಪೊಲೀಸ್ ಸೂಪರಿಂಟೆಂಡೆಂಟ್ ಎಂ.ಎನ್.ಶಶಿಧರ ಸೇರಿದಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.
——-