ಒಲವಿಗೆಂತಹ ಲೆಕ್ಕಾಚಾರ?
ನಿನ್ನ ಸೂಕ್ಷ್ಮನೋಟಕ್ಕೆ ಸಿಕ್ಕಿಕೊಳ್ಳುವ
ಅಸೂಕ್ಷ್ಮ ವಿವರಗಳು
ಬಂಧದ ಹದ ತಪ್ಪಿಸುತ್ತಿದೆ
ತುಸುವೇ ನಿಧಾನಿಸು
ಕಡಲು ಸುಮ್ಮನೆ ಉಕ್ಕುವುದಿಲ್ಲ
ಒಲವ ಹುಣ್ಣಿಮೆಯಿಲ್ಲದೆ.
ಮಳೆ ಹನಿಗಳಷ್ಟೇ ಬೆಸೆಯುತ್ತಿಲ್ಲ
ಬಾನು ಭುವಿಯನ್ನು.
ಒಮ್ಮೆ ಕಣ್ಣುಬಿಟ್ಟು ನೋಡು
ಬೆಳಕಿಗೂ ಪಾಲಿದೆ ಅಲ್ಲಿ.
ಸಿಕ್ಕುಗಳಿಂದ ಬಿಡಿಸಿಕೊಂಡಷ್ಟೂ
ಒಂಟಿಯಾಗುತ್ತಿದೆ ನೂಲು
ಬಟ್ಟೆಯಾಗದೆ ಉಳಿಯುವಷ್ಟೂ
ಸೋಲುತ್ತಿದೆ ಅದರ ನಿಲುವು.
ಅದೆಷ್ಟು ಬಿರುಕುಗಳನ್ನು
ಒಡಲಲ್ಲಿ ಬಚ್ಚಿಟ್ಟುಕೊಂಡು
ಮಡಕೆಯಾಗುತ್ತಿಲ್ಲ ಹಸಿಮಣ್ಣು?
ಜೊತೆಗಿರುವಷ್ಟು ಹೊತ್ತು
ನನ್ನನ್ನು ನಾ ಕಳೆದುಕೊಳ್ಳುತ್ತೇನೆ.
ಮುಚ್ಚಿಕೊಳ್ಳಲಿ ಜಗದ ಬಾಗಿಲು
ನಿನ್ನಲ್ಲಿ ನಾ ತೆರೆದುಕೊಳ್ಳುತ್ತೇನೆ.
ಬಿಡು ಬಿಡು,
ಒಲವಿಗೆಂತಹ ಲೆಕ್ಕಾಚಾರ?
ಕೊಟ್ಟಷ್ಟೂ ಕೊಂಡುಕೊಂಡೆವು
ತೆರೆದಷ್ಟೂ ಕಂಡುಕೊಂಡೆವು.
-ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು, ಮಂಗಳೂರು
—–