ಅನುದಿನ ಕವನ-೧೦೨೭, ಕವಿ:ಡಾ.ವೆಂಕಟೇಶ್ ನೆಲ್ಲುಕುಂಟೆ, ಬೆಂಗಳೂರು

ಕೈಗೆಟುವಷ್ಟು ದಿನಗಳ ಕೆಳಗೆ
ಹುಡುಗಿಯ ಮೋಹದ ಮನಸಿಗೆ ಉಯ್ಯಾಲೆ ಕಟ್ಟಿ ಜೀಕುತ್ತಿದ್ದೆ.
ನೆನಪು ಕನಸುಗಳು ಹೂತು ಕೂತಿವೆ
ಮರ ಉದುರಿ ಚಿಗುರುತ್ತದೆ
ನನ್ನಿಂದಾಗದು.

ಬಿದ್ದ ಬಿಸಿಲು
ಸುಟ್ಟ ಮಂಜು
ಕಾಡಿದ ಮಳೆ
ಜೋಗುಳ ಹಾಡಿದ ಹಕ್ಕಿ
ಕೂತು ಕೆಳಗೆ ನಕ್ಕು ದುಃಖಿಸಿದ ಪ್ರೇಮಿಗಳು
ಕಾದುಕೊಂಡಿದೆ ಮರ
ಒಡಲಿನಂತೆ ನೆನಪುಗಳನ್ನು.

ನಮ್ಮ ನೆನಪೂ ಇರಬಹುದು ಅದಕ್ಕೆ
ಕಿರಂ, ಡಿಆರ್, ಬೋದಿಲೇರನ ಪಾಪದ ಹೂವು
ಯೇಟ್ಸನ ಮೇಲೆ ಬರೆದ ನೋಟ್ಸು
ವಾಲ್ಮೀಕಿ ಅಲ್ಲಮ
ರಿದಮ್ಮಿಗೆ ಸಿಗದ ವ್ಯಾಸ ಕುವೆಂಪು ಕುಮಾರವ್ಯಾಸ
ಯಶೋಧರನ ದುಃಖವನ್ನಷ್ಟೆ ಬರೆದನೆ ಜನ್ನ ?
ಹುಡುಗಿಯರೇಕೆ ಚಕ್ರರಿಗೆ ಬೊಗಸೆಯೊಡ್ಡುತ್ತಾರೆ
ಜಗದ ನೋವಿಗೆ ಬರೆವ ಮುಲಾಮು ಅವರ ಬಳಿಯೇ ಇದೆಯೆ?

ಎಷ್ಟೆಲ್ಲ ಮಾತು!
ಕಿವಿಗೊಟ್ಟು ಕೇಳಿದರೆ ಬಿಚ್ಚುತ್ತದೆ ಮರ
ಬುತ್ತಿಯನ್ನು.

ಪಂಪ ನಮ್ಮ ಹೆಗಲ ಮೇಲೆ ಕೈಹಾಕಿ ಹೇಳಿದಂತೆ!
ಮುಟ್ಟಬಾರದ ಮನುಷ್ಯರಿಲ್ಲ
ಕೊಟ್ಟು ಕೊರಗುವ ತಾರೆಗಳಿಲ್ಲ
ಉರಿದರೆ ಬೂದಿಯೂ ಸಿಗಬಾರದಲ್ಲ.
ಸೋಕಿದವರ ಎದೆಯೊಳಗೆಲ್ಲ
ಪ್ರೇಮದ ಕಡಲು
ಧರ್ಮವಿಲ್ಲ ದ್ವೇಷವಿಲ್ಲ
ಜಾತಿಯಿಲ್ಲ ಭೀತಿಯಿಲ್ಲ
ಗಡಿಗಳಿಲ್ಲ ಗಾವಿಲರಿಲ್ಲ
ಮಳೆ ಹನಿಗಳ ಹೊಲಿದು
ಹೊಸ ಅಂಗಿ ತೊಟ್ಟಂತೆ

ಉಸಿರ ಕಡಲು ಮೊರೆವುದು ಬರಿ ದುಃಖದರಿವಿನಿಂದಲ್ಲ
ಪ್ರೇಮವೂ ಬಿಕ್ಕುತ್ತದೆ ನವಿರಿನಿಂದ

ಅರಳಿಯಡಿ ಬುದ್ಧ
ಮಾವಿನಡಿ ಪಂಪ
ಆಲ ಹಲಸು ತೂಗಿ ತೆಂಗು
ಬೀದಿ ಬೆಳಗುವ ಹೊಂಗೆ
ಬೇವಿನೆತ್ತರ  ಬಾರೆ

ಹೋಗಿ ಕೇಳಬೇಕು
ಆಡಿದ್ದೇನು ನಾವು
ಮಾಡಿದ್ದೇನು ನೋವು
ಮಾಗಲಿಲ್ಲ
ಏಗಲಿಲ್ಲ
ಎದೆ ಎದೆಯೊಳಗೆ ಎದ್ದು ಕೂತಿವೆ ಚಂಡಮಾರುತ
ತಣ್ಣಗಾಗುವುದೆಂದು
ಕಟ್ಟಿಕೊಂಡ  ದಾರಗಳೆಲ್ಲ ಸುಟ್ಟು ಹೋಗುವುದೆಂದು
ಬೂದಿ ಮಾತ್ರ ರಾಶಿ ಹಾಕುವ  ಯುದ್ಧಗಳಿಗೆ ಸಾವು ಬರುವುದು ಎಂದು?

ಕೇಳಬೇಕು ಮರವನ್ನು
ಬೊಗಸೆಯೊಡ್ಡಿ ಪ್ರೇಮವನ್ನು.


-ಡಾ.ವೆಂಕಟೇಶ್ ನೆಲ್ಲುಕುಂಟೆ, ಬೆಂಗಳೂರು
—–