ಬೆಂಕಿಯುಗುಳುವ ನಾಲಿಗೆಯ
ಮೇಲೆ ನವಿಲು ಕುಣಿದರೆ
ಗಂಟಲರೆದು ಹಾಡಬೇಕು
ಕುಣಿ ಕುಣಿದು ಉರಿಯ ನಂದಿಸಬೇಕಷ್ಟೇ …
ಹೊಕ್ಕಳದಿಂದ ಒಂದು ಹೂವು
ಅರಳಿ ನಕ್ಕರೆ
ಕೀಳದೆ ನೀರೆರೆಯಬೇಕು
ಹೂವಿಗೆ ಪ್ರೇಮವೆಂದು ಹೆಸರಿಡಬೇಕಯಷ್ಟೇ…
ಕೋಣೆಯಲೀ ಹಕ್ಕಿಯೊಂದು
ಬಂಧಿಯಾಗುವಾಸೆ ಪಟ್ಟರೆ
ಮನೆಯ ಸದಸ್ಯನೆನ್ನಬೇಕು
ಸಂಸಾರದ ಹಾಡ ಕಲಿಸಬೇಕಷ್ಟೆ…
ಅಡುಗೆ ಬಾರದ ಆಸಾಮಿ
ಉಣ್ಣಲು ಕುಂತರೆ
ಏನು ಅನ್ನದೆ ಬಡಿಸಬೇಕು
ಬಾಣಸಿಗನ ಪಟ್ಟಕಟ್ಟಬಾರದಷ್ಟೇ…
ಯಾತರದು ತಿಳಿಯದ ಕಪ್ಪೆ
ಪ್ರವಚನ ಕೊಟ್ಟರೆ
ವಟಗುಟ್ಟಲು ಬಿಡಬೇಕು
ಒದರಿದ್ದೆಲ್ಲ ಉಗುಳು ಅನ್ನಬೇಕಷ್ಟೇ …
-ವಿಶಾಲ್ ಮ್ಯಾಸರ್, ಹೊಸಪೇಟೆ
*****