ನಿಮಗೆಂದೂ ನಿಲುಕುವುದಿಲ್ಲ
ನಿಮಗಿದು ತಿಳಿದಿರಲಿ
ಟೊಳ್ಳು, ನಾಟಕೀಯ ಜನರೆಂದೂ
ನನ್ನನ್ನು ತಲುಪಲಾರರು
ಯಾವುದೇ ನಕಾಶೆಯಲ್ಲಿ
ದಾರಿ ಹುಡುಕಿಕೊಂಡು
ನನ್ನನ್ನು ‘ಕೆಡುಕಿನ ಮನೆ’ಯಾಗಿಸಲು
ಹೊರಟವರಿಗೆ ನಾನೆಂದೂ ಸಿಗುವುದಿಲ್ಲ
ಪ್ರೀತಿಯ ಟೋಕನ್,
ಗೌರವದ ಟಿಕೆಟ್ ತೆಗೆದುಕೊಂಡು
ನೀವಿಲ್ಲಿಗೆ ಬಾರದಿದ್ದರೆ
ನನ್ನನ್ನೆಂದೂ ತಲುಪಲಾಗುವುದಿಲ್ಲ
ಕರುಣೆ ದಯೆಯನ್ನು ಮರೆತುಬಂದರೆ
ನನ್ನ ಗೋಡೆಗಳು ಎತ್ತರೆತ್ತರಕ್ಕೇರುತ್ತವೆ
ನೀವು ಹತ್ತಿರವೂ ಬರಲಾರಿರಿ
ಇದುವರೆಗೂ ನಾನು ಖುಷಿಯಿಂದ
ಬಿಚ್ಚಿದ ಉಡುಗೊರೆಯೆಂದರೆ ನೆಮ್ಮದಿ !
(ನನ್ನೊಳಗೆ ಹಾದು ಹೋದ ಮತ್ತೊಂದು ಭಾಷೆಯ ಕವಿತೆ )
-ಎಂ.ಆರ್. ಕಮಲ, ಹಿರಿಯ ಕವಿಯಿತ್ರಿ, ಬೆಂಗಳೂರು
—–