ಹಿರಿಯ ಬಯಲಾಟ‌ ಕಲಾವಿದೆ ಸುಜಾತಮ್ಮ ಅವರಿಗೆ ಶ್ರೀ‌ಮಹರ್ಷಿ ವಾಲ್ಮೀಕಿ‌ ಪ್ರಶಸ್ತಿ:ಸಾಂಸ್ಕೃತಿಕ‌ ಲೋಕ ಹರ್ಷ

ಬಳ್ಳಾರಿ, ಅ.27: ವಿವಿಧ ರಂಗಗಳಲ್ಲಿ ಅನುಪಮ‌ ಸೇವೆ ಸಲ್ಲಿಸಿರುವ ಸಾಧಕರಿಗೆ ರಾಜ್ಯ ಸರಕಾರ ನೀಡುವ
ರಾಜ್ಯ ಮಟ್ಟದ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ನಗರದ ಹಿರಿಯ ಬಯಲಾಟ‌ ಕಲಾವಿದೆ ಸುಜಾತಮ್ಮ ಅವರು ಭಾಜನರಾಗಿದ್ದಾರೆ.
ಕಳೆದ ಆರು ದಶಕಗಳಿಂದ ಬಯಲಾಟ ಕ್ಷೇತ್ರಕ್ಕೆ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಪರಿಶಿಷ್ಟ ವರ್ಗಗಳ ಇಲಾಖೆ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ಅ.28 ರಂದು ಬೆಂಗಳೂರಿನ ವಿಧಾನಸೌಧದ ಬಾಂಕ್ವೇಟ್ ಹಾಲ್‌ನಲ್ಲಿ ಹಮ್ಮಿಕೊಂಡಿರುವ ಶ್ರೀ ಮಹರ್ಷಿ ವಾಲ್ಮೀಕಿ‌ ಜಯಂತೋತ್ಸವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶಸ್ತಿ ನೀಡಿ ಗೌರವಿಸುವರು.


ಸುಜಾತಮ್ಮ ಅವರಿಗೆ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ದೊರೆತಿರುವುದಕ್ಕೆ ಅವಿಭಜಿತ ಬಳ್ಳಾರಿ ಜಿಲ್ಲೆಯ ಸಾಂಸ್ಕೃತಿಕ ಲೋಕ ಹರ್ಷ ವ್ಯಕ್ತಪಡಿಸಿದೆ.
ಬಳ್ಳಾರಿ ಲೋಕಸಭೆಯ ಮಾಜಿ ಸಂಸದ, ನ್ಯಾ. ಎನ್ ವೈ ಹನುಮಂತಪ್ಪ ಅವರಿಗೂ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಲಭಿಸಿದೆ.
ಕರ್ನಾಟಕ ಕಹಳೆ ಡಾಟ್ ಕಾಮ್ ಶುಕ್ರವಾರ ಸಂಜೆ‌ ಸುಜಾತಮ್ಮ ಅವರ ನಿವಾಸಕ್ಕೆ ಭೇಟಿ‌ ನೀಡಿದಾಗ ಕುಟುಂಬ ಸದಸ್ಯರ ಸಂಭ್ರಮದಲ್ಲಿದ್ದರು. ಪರಸ್ಪರ ಸಿಹಿ ಹಂಚಿ ಖುಷಿಪಟ್ಟರು.
ಸನ್ಮಾನ: ರಾಜ್ಯ ಮಟ್ಟದ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಭಾಜನರಾದ ಸುಜಾತಮ್ಮ ಅವರನ್ನು
ಕರ್ನಾಟಕ ಜಾನಪದ ಪರಿಷತ್ತು, ಬೆಂಗಳೂರು, ಬಳ್ಳಾರಿ ಜಿಲ್ಲಾ ಘಟಕ ಸನ್ಮಾನಿಸಿ ಗೌರವಿಸಿತು.
ಜಿಲ್ಲಾಧ್ಯಕ್ಷ, ಹಿರಿಯ ಪತ್ರಕರ್ತ ಸಿ ಮಂಜುನಾಥ್ ಹಾಗೂ ಪ್ರಧಾನ ಕಾರ್ಯದರ್ಶಿ ಡಾ ಅಶ್ವ ರಾಮು ಅವರು ಬಯಲಾಟದ ಹಿರಿಯ ಕಲಾವಿದೆ ಶ್ರೀಮತಿ ಸುಜಾತಮ್ಮ ಅವರನ್ನು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಕುಟುಂಬದ ಸದಸ್ಯರು, ಕಲಾ‌ಪೋಷಕರು ಉಪಸ್ಥಿತರಿದ್ದರು.
*****