ಬೆಂಗಳೂರಿನಲ್ಲಿ ಇಂದು(ಅ.28) ಹಾಡುವ ಹಕ್ಕಿ ಡಾ. ಬಾನಂದೂರು ಕೆಂಪಯ್ಯ ಅವರ ಅಭಿನಂದನಾ ಗ್ರಂಥ ‘ಬಾನಂದದ ಕಿನ್ನರಿ’ ಲೋಕಾರ್ಪಣೆ

ಬೆಂಗಳೂರು, ಅ.28: ಹಾಡುವ ಹಕ್ಕಿ, ಜಾನಪದ ಕೋಗಿಲೆ ಎಂದೇ ಪ್ರಸಿದ್ಧರಾದ ಡಾ. ಬಾನಂದೂರು ಕೆಂಪಯ್ಯ ಅವರ ಬದುಕು-ಹಾಡುಗಾರಿಕೆ ಕುರಿತ ‘ಬಾನಂದದ ಕಿನ್ನರಿ’ ಅಭಿನಂದನಾ‌ ಗ್ರಂಥ ಲೋಕಾರ್ಪಣೆ ಸಮಾರಂಭ ಇಂದು(ಅ.28) ಶನಿವಾರ ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನ ಶಿಕ್ಷಣದತ್ತಿ ಸಭಾಂಗಣದಲ್ಲಿ ಬೆ. 10 ಗಂಟೆಗೆ ಜರುಗಲಿದೆ.


ಬೆಂಗಳೂರಿನ ಪಿತಾಮಹ ಪ್ರಕಾಶನ ಪ್ರಕಟಿಸಿರುವ ಅಭಿನಂದನಾ ಗ್ರಂಥವನ್ನು ಹಂಪಿ ಕನ್ನಡ ವಿವಿ ವಿಶ್ರಾಂತ ಕುಲಪತಿ, ಜಾನಪದ ವಿದ್ವಾಂಸ ಡಾ. ಹಿ. ಚಿ ಬೋರಲಿಂಗಯ್ಯ ಅವರು ಲೋಕಾರ್ಪಣೆಗೊಳಿಸುವರು.
ಶಿಕ್ಷಣ ತಜ್ಞ ನಾಡೋಜ ಡಾ. ವೂಡೇ ಪಿ ಕೃಷ್ಣ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ವಿಶ್ರಾಂತ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ(ಎಡಿಜಿಪಿ(ನಿ)-ಕಾನೂನು ಮತ್ತು ಸುವ್ಯವಸ್ಥೆ) ಡಾ.ಸುಭಾಷ್ ಭರಣಿ, ವಿಧಾನ ಪರಿಷತ್ತು ಮಾಜಿ ಸದಸ್ಯ, ಸಾಹಿತಿ ಡಿ.ಎಸ್ ವೀರಯ್ಯ, ಜಾನಪದ ಸಂಶೋಧಕ ಹಾಗೂ ಗಾಯಕ ಡಾ.‌ವೇಮಗಲ್ ನಾರಾಯಣ ಸ್ವಾಮಿ ಅವರು ಭಾಗವಹಿಸುವರು.
ಡಿಡಿ-ಚಂದನ ಕಾರ್ಯಕಾರಿ ನಿರ್ಮಾಪಕ(ನಿ)ರೂ ಆದ ಪ್ರಸಿದ್ಧ ಜಾನಪದ ಗಾಯಕ ಡಾ.‌ಬಾನಂದೂರು ಕೆಂಪಯ್ಯ, ಶ್ರೀಮತಿ ಸುಚಿತ್ರ ಬಾನಂದೂರು ಕೆಂಪಯ್ಯ ಅವರು ಉಪಸ್ಥಿತರಿರುವರು.
ಅಭಿನಂದನ ಗ್ರಂಥದ ಸಂಪಾದಕರು, ಹಿರಿಯ ಪತ್ರಕರ್ತರೂ ಆದ ಸಾಹಿತಿ ಲಕ್ಷ್ಮಣ ಕೊಡಸೆ ಅವರು ಪುಸ್ತಕ ಕುರಿತು ಹಾಗೂ ಜಾನಪದ ತಜ್ಞ ಡಾ. ಮೀರಾಸಾಬಿಹಳ್ಳಿ ಶಿವಣ್ಣ ಪ್ರಾಸ್ತಾವಿಕವಾಗಿ ಮಾತನಾಡುವರು.
ಕರ್ನಾಟಕ ಜಾನಪದ‌ ಪರಿಷತ್ತು, ಬೆಂಗಳೂರು ಜಿಲ್ಲಾ ಘಟಕದ ಅಧ್ಯಕ್ಷ ಟಿ.ತಿಮ್ಮೇಶ್ ಕಾರ್ಯಕ್ರಮ ನಿರೂಪಿಸುವರು.


ಸುಪ್ರಸಿದ್ಧ ಗಾಯಕರು ಜನಪದ ಗೀತೆಗಳನ್ನು ಹಾಡುವರು. ಗಣೇಶ್ ಪ್ರಸಾದ್ ಕೀಬೋರ್ಡ್, ಶಿವಶಂಕರ್ ತಬಲ ಸಾಥ್ ನೀಡುವರು.
ಶೇಷಾದ್ರಿಪುರಂ ಕಾಲೇಜು, ಪಿತಾಮಹ ಪ್ರಕಾಶನ ಹಾಗೂ ಡಾ.ವೇಮಗಲ್‌ನಾರಾಯಣ ಸ್ವಾಮಿ ಸಾಂಸ್ಕೃತಿಕ ಪ್ರತಿಷ್ಠಾನ ಇವರ ಸಹಯೋಗದಲ್ಲಿ ಕಾರ್ಯಕ್ರಮ‌ ಆಯೋಜಿಸಲಾಗಿದೆ.
*****