‘ಬಾನಂದದ ಕಿನ್ನೂರಿ’ ಕೃತಿ ಜಾನಪದ ಅಧ್ಯಯನಕ್ಕೆ ಆಕರ ಗ್ರಂಥ -ಡಾ.ಹಿ.ಚಿ.ಬೋರಲಿಂಗಯ್ಯ


ಬೆಂಗಳೂರು, ಅ.28: ಭಾರತ ಸ್ವಾತಂತ್ರ್ಯಗೊಳ್ಳುವವರೆಗೆ ಜಾನಪದ ಕುರಿತು ಬಂದಿರುವ ಕೃತಿಗಳು ದಲಿತ ಲೋಕದ ಕೊಡುಗೆಗಳ ಬಗ್ಗೆ ಅರ್ಧಸತ್ಯವನ್ನು ಮಾತ್ರವೇ ಹೇಳಿದ್ದವು. ಆದರೆ, ಇವತ್ತು ಬಿಡುಗಡೆಯಾದ ಬಾನಂದದ ಕಿನ್ನೂರಿ ಕೃತಿಯೂ ಸೇರಿದಂತೆ ಕೆಲವಷ್ಟೇ ಕೃತಿಗಳು ಪೂರ್ಣ ಸತ್ಯವನ್ನು ಹೇಳುತ್ತಿರುವುದು ಶ್ಲಾಘನೀಯ ಎಂದು ಹಿರಿಯ ಜಾನಪದ ವಿದ್ವಾಂಸ ಮತ್ತು ಹಂಪಿ ಕನ್ನಡ ವಿವಿ.ವಿಶ್ರಾಂತ ಕುಲಪತಿ ಡಾ.ಹಿ.ಚಿ.ಬೋರಲಿಂಗಯ್ಯ ಅವರು ತಿಳಿಸಿದರು.
ಪಿತಾಮಹ ಪ್ರಕಾಶನ, ಡಾ.ವೇಮಗಲ್ ನಾರಾಯಣ ಸ್ವಾಮಿ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ  ಶನಿವಾರ ನಡೆದ ಹಾಡುವ ಹಕ್ಕಿ ಡಾ.ಬಾನಂದೂರು ಕೆಂಪಯ್ಯನವರ ‘ಬದುಕು- ಗಾಯನ’ ಕುರಿತ ಅಭಿನಂದನಾ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.                              ಬಾನಂದದ ಕಿನ್ನೂರಿ ಕೃತಿಯು ಜಾನಪದ ಅಧ್ಯಯನ ಮಾಡುವವರಿಗೆ ಆಕರ ಗ್ರಂಥವಾಗಲಿದೆ ಎಂದರು.
ಡಾ.ಬಾನಂದೂರು ಕೆಂಪಯ್ಯನವರ ವ್ಯಕ್ತಿತ್ವ, ಸಾಧನೆಗಳನ್ನು ಮೆಲುಕು ಹಾಕುತ್ತಲೇ ಅವರ ಜೊತೆಗಿನ ರಸಕ್ಷಣಗಳನ್ನು ಕುರಿತು ವಿಶ್ರಾಂತ ಎಡಿಜಿಪಿ ಡಾ.ಸುಭಾಷ್ ಭರಣಿ, ಮಾಜಿ ಶಾಸಕ ಡಿ.ಎಸ್.ವೀರಯ್ಯ, ಜಾನಪದ ಗಾಯಕ ಡಾ.ವೇಮಗಲ್ ನಾರಾಯಣ ಸ್ವಾಮಿ ಮಾತನಾಡಿದರು. ಕೃತಿ ಸಂಪಾದಕ ಹಿರಿಯ ಸಾಹಿತಿ ಲಕ್ಷ್ಮಣ ಕೊಡಸೆ ಕೃತಿ ಪರಿಚಯಿಸಿದರು.
ನಾಡೋಜ ವೂಡೆ.ಪಿ.ಕೃಷ್ಣ ಅಧ್ಯಕ್ಷತೆ ವಹಿಸಿದ್ದರು.
ಸಾಹಿತಿ, ಜಾನಪದ ವಿದ್ವಾಂಸ ಡಾ.ಮೀರಾಸಾಬಿಹಳ್ಳಿ ಶಿವಣ್ಣ ಸ್ವಾಗತಿಸಿದರು. ಟಿ.ತಿಮ್ಮೇಶ್ ನಿರೂಪಿಸಿದರು.
ಹಲವು ಗಾಯಕ-ಗಾಯಕಿಯರು ಜನಪದ ಹಾಡುಗಳನ್ನು ಹಾಡಿ ರಂಜಿಸಿದರು.
ಇದೇ ಸಂದರ್ಭದಲ್ಲಿ ಡಾ.ಬಾನಂದೂರು ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.