ಎಲ್ಲಾದರು ಇರು, ಎಂತಾದರು ಇರು
ಎದೆಂದಿಗೂ ನೀ ಕನ್ನಡವಾಗಿರು
ರಾಷ್ಟ್ರಕವಿ ಕುವೆಂಪು ಅವರ ಈ ಕಳಕಳಿಗೆ ನಿಜವಾಗಲೂ ಸ್ಪಂದಿಸುತ್ತಿರುವವರು ಹೊರನಾಡ ಕನ್ನಡಿಗರು. ನಮ್ಮ ನೆಲ,ಜಲ ಭಾಷೆ ಬಿಟ್ಟು ಜೀವನ ನಡೆಸುವ ಅನಿವಾರ್ಯತೆಯಿಂದ ಹೊರಗೆಲ್ಲೂ ನೆಲೆಸಿರುವವರಿಗೆ, ತಮ್ಮೆದೆಲ್ಲವ ಬಿಟ್ಟ ನೋವಿನಿಂದಲೋ, ತಪ್ಪಿತಸ್ಥ ಭಾವನೆಯಿಂದಲೋ, ತಾವೇನೋ ಕಳೆದುಕೊಳ್ಳೋತ್ತಿದ್ದೇವೆ ಎನ್ನುವ ಅನುಮಾನದಿಂದಲೋ ದೇಶ, ಭಾಷೆಗಳನ್ನು ಇನ್ನೂ ಹೆಚ್ಚು ಪ್ರೀತಿಸುತ್ತಾರೆ. ತಮ್ಮ ಜಾಗಗಳಲ್ಲಿಯೇ ಕನ್ನಡ ಸಂಘಗಳನ್ನು ಸ್ಥಾಪಿಸಿಕೊಂಡು ಕನ್ನಡಿಗರನ್ನು ಒಟ್ಟು ಗೂಡಿಸಿ ಕನ್ನಡವನ್ನು ಜಾಗೃತಗೊಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ತಮಗೆ ತಿಳಿದಿರುವ ಸರಳ ಭಾಷೆಯಲ್ಲಿಯೇ ಕಥೆ ಕವನ ಬರೆಯಲು ಪ್ರಯತ್ನಿಸುತ್ತಾರೆ, ಅದನ್ನು ಬೇರೆಯವರಿಗೆ ತೂರಿಸಿ ಹೆಮ್ಮೆ ಪಡುತ್ತಾರೆ. ಹೊರನಾಡಿನಲ್ಲಿಯೇ ಇದ್ದುಕೊಂಡು ಅದ್ಭುತವಾಗಿ ಬರೆದ ಬರಹಗಾರರು ಕನ್ನಡದಲ್ಲಿ ಇದ್ದಾರೆ. ಇಥೋಪಿಯಾದಲ್ಲಿ ಹದಿನೈದು ವರ್ಷಗಳಿದ್ದು ಬರೆದ ಕೆ.ಟಿ.ಗಟ್ಟಿ ಯಂಥ ಅದ್ಬುತ ಕಾದಂಬರಿಕಾರರು ನಮ್ಮಲಿದ್ದಾರೆ ಎನ್ನುವುದು ಒಂದು ಹೆಮ್ಮೆ.
ಆದರೆ ನಮ್ಮದೇ ರಾಜ್ಯ ಕರ್ನಾಟಕದಲ್ಲಿ ಏನಾಗುತ್ತಿದೆ. ಬರಹಗಾರರು ಹೆಚ್ಚಾಗುತ್ತಿದ್ದಾರೆ, ಹೆಚ್ಚು ಪುಸ್ತಕಗಳು ಪ್ರಕಟಣೆಯಾಗುತ್ತಿವೆ, ಆದರೆ ಓದುವವರೇ ಇಲ್ಲವಾಗುತ್ತಿದ್ದಾರೆ. ಪುಸ್ತಕ ಕೊಂಡು ಓದುವವರಂತೋ ಅತೀ ಕಡಿಮೆ. ಅನೇಕರು ಇನ್ನು ಹಳೇ ಬರಹಗಾರರ ಪುಸ್ತಕಗಳನ್ನು ಕೊಂಡು ಓದುತ್ತಾರೆ. ಬರೆಯುವವರೇ ಇನ್ನೊಬ್ಬರ ಪುಸ್ತಕ ಓದುವ ಸ್ಥಿತಿ. ಓದುಗ ಬಳಗ ಸೃಷ್ಟಿಸಲು ನಾವು ವಿಫಲರಾಗುತ್ತಿದ್ದೇವೆ. ಇಲ್ಲಾ ಜನಕ್ಕೆ ಓದುವ ಆಸಕ್ತಿ ಕಡಿಮೆ ಆಗಿರಬೇಕು, ಇಲ್ಲ ಇಂದಿನ ಬರಹಗಾರರಲ್ಲಿ ಗಟ್ಟಿಸಾಹಿತ್ಯ ಸೃಷ್ಟಿಸುವ ಶಕ್ತಿ ಇಲ್ಲದಿರಬೇಕು. ಕನ್ನಡದಲ್ಲಿ ಅನೇಕ ಸುದ್ದಿ ಸಮಾಚಾರ ಪತ್ರಿಕೆಗಳು, ಮ್ಯಾಗಜಿನ್ ಗಳು ಪ್ರಕಟವಾಗುತ್ತಿವೆ, ಅವುಗಳ ಉತ್ತಮ ಪ್ರಸರಣವೂ ಇದೆ, ಅಂದರೆ ಜನ ಓದುತ್ತಿರಬೇಕಲ್ಲವೇ. ಆದರೆ ಅವರು ಓದುತ್ತಿರುವುದು ಏನನ್ನು?. ಜನ ಹೆಚ್ಚು ಓದುತ್ತಿರುವುದು ರಾಜಕೀಯ ಸಮಾಚಾರಗಳನ್ನು, ರಾಜಕಾರಣಿಗಳು ಕೊಡುವ ಹೇಳಿಕೆ, ಪ್ರತಿ ಹೇಳಿಕೆಗಳನ್ನು. ರಾಜಕೀಯ ಸುದ್ದಿಗಳಿಗೆ ಜನರ ಸ್ಪಂದನೆ ಹೆಚ್ಚಾಗಿರುವುದು, ಸಾಮಾಜಿಕ ಮಾಧ್ಯಮಗಳಲ್ಲಿ ಜನ ಜಗಳವಾಡುವುದು ನೋಡುತ್ತಿದ್ದೇವೆ. ಯಾವುದೋ ವಿಷಯ ಜನ ಕನ್ನಡ ಓದುತ್ತಾರಲ್ಲ ಎಂದು ಆನಂದಿಸೋಣವೇ?
ಎಲ್ಲಾ ತರಹದ ಪತ್ರಿಕೆಗಳಲ್ಲಿ ಸಾಹಿತ್ಯಕ್ಕೆ ಜಾಗ ಕಡಿಮೆಯಾಗುತ್ತಿದೆ. ಹಿಂದೆ ಕ್ರೀಡಾಲೋಕದ ಜಾಗವನ್ನು (ಅಂದರೆ ಕೊನೆಯ ಪುಟ) ಈಗ ಸಾಹಿತ್ಯ ಆಕ್ರಮಿಸಿಕೊಳ್ಳುತ್ತಿದೆ, ಅಂದರೆ ಸಾಹಿತ್ಯ ಕೊನೆಗೆ ನೂಕಲ್ಪಟ್ಟ್ಟಿದೆ. ಎಲ್ಲಾ ಓದಿ, ಓದುಗ ಕೊನೆಯ ಪುಟಕ್ಕೆ ಬರುವಹೊತ್ತಿಗೆ, ಬೇಸರದಿಂದಲೋ, ಸಮಯದ ಅಭಾವದಿಂದಲೋ, ದಣಿವಿನಿಂದಲೋ ಕೊನೆಯಪುಟದ ಮೇಲೆ ಹಾಗೆ ಕಣ್ಣಾಡಿಸಿ ಪತ್ರಿಕೆ ಎಸೆಯುತ್ತಾನೆ, ಅಷ್ಟರಲ್ಲೇ ಕನ್ನಡ ಸಾಹಿತ್ಯ ತೃಪ್ತಿಹೊಂದಬೇಕು. ಎಷ್ಟೋ ಪತ್ರಿಕೆಗಳು ಕವನಗಳನ್ನು ಪ್ರಿಂಟ್ ಮೀಡಿಯಾದಲ್ಲಿ ಪ್ರಕಟಿಸುವುದನ್ನು ನಿಲ್ಲಿಸಿಬಿಟ್ಟೆವೆ, ಇಲ್ಲಾ ಅಂತರ್ಜಾಲದಲ್ಲಿ ಪ್ರಕಟಿಸುತ್ತಿವೆ. ಪ್ರಖ್ಯಾತ ಪತ್ರಿಕೆಗಳು ಕೂಡ ಕವನ, ಕಥೆ ಪ್ರಕಟಿಸುವುದಿಲ್ಲ. ಮಕ್ಕಳಿಗೆ ಕನ್ನಡ ಓದುವ ಅಭ್ಯಾಸ ಬರಬೇಕೆಂದರೆ ಅದು ಕವನ, ಕಥೆಗಳ ಮೂಲಕವೇ ಆಗಬೇಕು, ಮಕ್ಕಳು ರಾಜಕೀಯ ಓದಿ ಓದುವ ಅಭ್ಯಾಸ ಬೆಳೆಸಿಕೊಳ್ಳಲು ಸಾಧ್ಯವೇ.
ಇನ್ನು ಬರೆಯುವವರ ವಿಷಯಕ್ಕೆ ಬಂದರೆ, ಏನನ್ನೂ ಓದದೇ ಭಾಷೆಯಮೇಲೆ ಹಿಡಿತವಿಲ್ಲದೆ ಬರೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಬರೆಯುವುದೆಲ್ಲಾ ಕವನವಾಗುತ್ತಿದೆ, ಬರಹಗಾರರ ಹತ್ತಿರದವರು ಅನಿವಾರ್ಯತೆಯಿಂದ ಆಹಾ ಒಹೋ ಎನ್ನುತ್ತಾರೆ, ಅಲ್ಲಿಂದ ಆಚೆಗೆ ಬರಹ ಹೋಗುವುದಿಲ್ಲ. ಬರೆಯುವುದನ್ನು ಗಂಭೀರವಾಗಿ ತೆಗೆದುಕೊಳ್ಳಬಯಸುವುದಾದರೆ ತುಂಬಾ ಓದಬೇಕು, ಪ್ರಖ್ಯಾತ ಸಮಕಾಲೀನ ಕವಿ/ಕವಿಯತ್ರಿಗಳ ಕವನಗಳನ್ನು ಅಭ್ಯಸಿಸಬೇಕು. ಒಳ್ಳೆಯ ಶೈಲಿ ರೂಡಿಸಿಕೊಳ್ಳಬೇಕು. ಕವನಗಳು ತುಂಬಾ ಸರಳವಾದರೆ ಹಿಡಿತ ವಿರುವುದಿಲ್ಲ. ಭಿನ್ನವಾಗಿ ಬರೆಯಬೇಕು. ಕಾವ್ಯ ವೆಂಬುದು ಭಾವನೆಗಳ ಆಗರ, ಭಾವನೆಗಳ ಪ್ರಸರಣ, ಭಾವನೆಗಳ ಮನನ. ಭಾವನೆಗಳನ್ನು ಯಾವುದೇ ರೂಪದಲ್ಲಿ ವ್ಯಕ್ತಪಡಿಸಬಹದು. ಕವಿತೆ, ಕತೆ, ಕಾದಂಬರಿ, ಲೇಖನ ಇತ್ಯಾದಿ, ಆದರೆ ಕಾವ್ಯಕ್ಕೆ ಪ್ರತ್ಯೇಕತೆ ಇದೆ, ಭಾವನೆಗಳನ್ನು ಮನದಾಳಕ್ಕೆ ಇಳಿಸಿ ಚಿಂತಿಸುವಂತೆ ಮಾಡುವ ಶಕ್ತಿ ಕಾವ್ಯಕ್ಕೆ ಇದೆ. ಅಂತಹ ಶಕ್ತಿ ಕಾವ್ಯಕ್ಕೆ ತರುವುದು ಕವಿ ಅಥವಾ ಕವಿಯತ್ರಿಯ ಶಕ್ತಿ ಕೂಡ. ಕಾವ್ಯ ಬರೀ ಶಬ್ದಾಡಂಬರವಾಗದೆ, ಹಿಂದೆ ಯಾರೋ ಆಡಿದ ಮಾತಿನ ಪುನರಾವರ್ತನೆ ಆಗದೆ, ಕ್ಲೀಷೆಗಳಿಂದ ತುಂಬದೇ ಮನತುಂಬಬೇಕು.
ಬರಹಗಾರರಿಗೆ ಸಾಮಾಜಿಕ ಬಾಧ್ಯತೆ ಇರಬೇಕು. ಬರಹ ಯಾವರೂಪದಲ್ಲಾದರೂ ಓದುಗರನ್ನು ಚಿಂತಿಸುವಂತೆ ಮಾಡಬೇಕು. ಬರಹ ಕಾವ್ಯ ಎದೆಯಾಳದಿಂದ ಉಕ್ಕಬೇಕು. ಜೀವನ, ದೈವ ಭಕ್ತಿ, ದೇಶಭಕ್ತಿ, ಪ್ರೀತಿ-ಪೇಮದ ಕವನಗಳು ಬಂದಿವೆ, ಬರುತ್ತಿವೆ, ಮುಂದೆ ಬರುತ್ತವೆ, ಆದರೆ ಪ್ರತಿಸಲ ಬರೆದಾಗಲೂ ಹೊಸತೆಂಬಂತೆ ಬರೆಯಬೇಕು, ಓದುಗನಿಗೆ ಹೊಸ ಅನುಭವ ನೀಡಬೇಕು. ಕಾವ್ಯ ಭಾವವುಕ್ಕಿ ಮನದಲಿ ಉಳಿಯಲಾಗದೆ ಹೊರಹೊಮ್ಮಬೇಕು. ಕಾವ್ಯ ಪ್ರಸವ ವೇದನೆಯ ನಂತರ ಹುಟ್ಟುವ ಮಗುವಾಗಬೇಕು. ಪ್ರೀತಿಯೊಂದು ಮಗುವು ಹೊಸತು, ಅನನ್ಯ ಮತ್ತು ವಿಭಿನ್ನ. ಬರಹ ಗಂಭೀರವಾಗಿರಬೇಕು, ಕಾಲಹರಣಕೆ ಕಾವ್ಯ ಬರೆಯಬಾರದು.
ಕನ್ನಡ ರಾಜ್ಯೋತ್ಸವ ಏಕೆ ಮಾಡಬೇಕು, ಇಂಗ್ಲಿಷಿನ ಪ್ರಭಾವ ಮತ್ತು ಮೋಹದಿಂದ, ,ಹಿಂದಿಯ ಹೇರಿಕೆಯಿಂದ ಕನ್ನಡದ ಉಸಿರುಕಟ್ಟುತ್ತಿದೆ. ಕನ್ನಡದ ಉಸಿರಾಟ ಸರಾಗ ಮಾಡಲು ಕನ್ನಡ ಕಾರ್ಯಕ್ರಮಗಳನ್ನು ಸಾಧ್ಯವಾದಷ್ಟು ಹಮ್ಮಿಕೊಳ್ಳಬೇಕು. ಕನ್ನಡ ಜಾತ್ರೆ ನಡೆಯನೇಕು, ಅಲ್ಲಿ ಜನರ ಸೇರಿಸಬೇಕು, ಮಕ್ಕಳನ್ನು ಕರೆದೊಯ್ಯಬೇಕು. ಕನ್ನಡ ಸಾಹಿತ್ಯದ ಬಗ್ಗೆ ಮಾತನಾಡಬೇಕು. ಕನ್ನಡದ ಶಕ್ತಿ, ಸೌಂದರ್ಯ ಮಕ್ಕಳಿಗೆ ತಿಳಿಸಬೇಕು. ಕರ್ನಾಟಕದ ನೆಲ, ಜಲ, ಭಾಷೆಯೆಂದರೆ ಒಂದು ತಿಂಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಿ ಮರೆಯುವುದಲ್ಲ, ವರ್ಷವಿಡೀ ಸರ್ಕಾರದ ಕನ್ನಡ ಜಾತ್ರೆಗಳನ್ನು ಮಾಡಬೇಕು. ಜನರಿಗೆ ಕನ್ನಡ ಪುಸ್ತಕ ಕೊಂಡು ಓದುವ ಅಭ್ಯಾಸ ಬೆಳೆಸಬೇಕು. ಸಿನಮಾ ನೋಡುವ ಸಮಯದ ಹತ್ತು ಪ್ರತಿಶತ ಸಮಯ ವ್ಯಯಸಿದರೂ ಸಾಕು, ಅನೇಕ ಪುಸ್ತಕಗಳನ್ನು ಓದಬಹುದು. ಕನ್ನಡ ಸಾಹಿತ್ಯಕ್ಕೆ ಹಣದ ಮೌಲ್ಯ ಇಲ್ಲವಾದ್ದರಿಂದಲೇ ಇಂತಹ ಸಮಸ್ಸೆಯೇನೋ, ಎಲ್ಲವನ್ನೂ ಹಣದ ರೂಪದಲ್ಲಿ ನೋಡುವ ಇಂದಿನ ದಿನಗಳ್ಲಲಿ ಸಾಹಿತಿಗಳಿಗೆ ಸಿನಮಾ ನಾಯಕರಿಗೆ ಸಿಗುವ ಹಣ ಸಿಗುವುದಾದರೆ, ಕವಿ, ಕಥೆಗಾರ, ಕಾದಂಬರಿಕಾರ ಕೂಡ ಸೆಲೆಬ್ರಿಟಿ ಆಗಬಹದು, ಸ್ಟಾರ್ ಆಗಬಹುದೇನೋ. ಶಿವರಾಮ ಕಾರಂತರ ಬಗ್ಗೆ ಜಯಂತ ಕಾಯ್ಕಿಣಿಯರು ಗೂಗಲ್ ಮೀಟ್ನಲ್ಲಿ ಮಾತನಾಡಿದರು,ಮನೆಯಲ್ಲೇ ಕುಳಿತು ಕೇಳಬಹುದಾದ ಆ ಕಾರ್ಯಕ್ರಮದಲ್ಲಿ ಮೊದಲಿಗೆ ಇಪ್ಪತ್ತು ಜನವಿದ್ದು, ಕೊನೆಗೆ ಹದಿನಾಲ್ಕು ಜನಗಳಾದರು. ಇದು ಸಾಹಿತಿಗಳೇ ಸಾಹಿತ್ಯಾಕ್ಕೆ ಕೊಡುವ ಪ್ರೀತಿ, ಇನ್ನು ಬೇರೆ ಜನಕ್ಕೆ ಏನು ಹೇಳುವುದು.
ಕನ್ನಡ ಬೆಳೆದಿದೆ, ಉಳಿಯುತ್ತದೆಯೇ, ಕಾಲವೇ ಹೇಳಬೇಕು. ಕನ್ನಡ ಮಾತನಾಡುವದು, ಕನ್ನಡ ಓದುವುದು, ಕನ್ನಡವನ್ನು ಪ್ರೀತಿಸುವುದು, ಗೌರವಿಸುವುದು, ಇದೇ ನಿಜವಾದ ಕನ್ನಡ ರಾಜ್ಯೋತ್ಸವ ಅಲ್ಲವೇ?
-ಎಂ.ವಿ.ಶಶಿಭೂಷಣ ರಾಜು
ಪೆನ್ಸಿಲ್ವೇನಿಯ, ಅಮೇರಿಕ
—–