ಬಳ್ಳಾರಿಯಲ್ಲಿ ಸಂಭ್ರಮದ ೬೮ನೇ ಕನ್ನಡ ರಾಜ್ಯೋತ್ಸವ: ಪ್ರಮುಖ ರಸ್ತೆಗಳಿಗೆ ಏಕೀಕರಣಕ್ಕೆ ಶ್ರಮಿಸಿದ ಮಹನೀಯರ ಹೆಸರು ನಾಮಕರಣ – ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ

ಬಳ್ಳಾರಿ,ನ.1: ಕರ್ನಾಟಕ ಏಕೀಕರಣದ ಸಮಯದಲ್ಲಿ ಹೋರಾಡಿದ ಮಹನೀಯರ ಹೆಸರನ್ನು ನಗರದ ಪ್ರಮುಖ ರಸ್ತೆ ಹಾಗೂ ವೃತ್ತಗಳಿಗೆ ನಾಮಕರಣ ಮಾಡಲಾಗುವುದು ಎಂದು ಯುವ ಸಬಲೀಕರಣ, ಕ್ರೀಡೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ಹೇಳಿದರು.
ಜಿಲ್ಲಾಡಳಿತ ವತಿಯಿಂದ ಡಾ.ರಾಜ್‍ಕುಮಾರ್ ರಸ್ತೆಯ ಸರ್ಕಾರಿ (ಮಾಜಿ ಪುರಸಭೆ) ಪದವಿ ಪೂರ್ವ ಕಾಲೇಜು ಮೈದಾನದ ಆವರಣದಲ್ಲಿ ಬುಧವಾರ ಆಯೋಜಿಸಲಾಗಿದ್ದ 68ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಕರ್ನಾಟಕ ರಾಜ್ಯವನ್ನು ಒಗ್ಗೂಡಿಸಲು ಮತ್ತು ಏಕೀಕರಣಕ್ಕೆ ಶ್ರಮಿಸಿದ ನಾಯಕರನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ, ಈ ನಿಟ್ಟಿನಲ್ಲಿ ಜಿಲ್ಲಾಡಳಿತ, ಮಹಾನಗರ ಪಾಲಿಕೆಯಿಂದ ಅವರ ಹೆಸರನ್ನು ರಸ್ತೆಗಳಿಗೆ, ವೃತ್ತಗಳಿಗೆ ನಾಮಕರಣಗೊಳಿಸಲು ಕ್ರಮ ವಹಿಸಬೇಕು ಎಂದು ಸೂಚಿಸಿದರು.
ಹುತಾತ್ಮ ರಂಜಾನ್ ಸಾಬ್: ಕರುನಾಡ ಏಕೀಕರಣಕ್ಕೆ ಬಲಿದಾನಗೈದ ಮಹಾವೀರ ಪಿಂಜಾರ್ ಪೈಲ್ವಾನ್ ರಂಜಾನ್ ಸಾಬ್ ಅವರು ಬಳ್ಳಾರಿಯವರು, ಅಂದಿಗೆ ರಾಜ್ಯಾದ್ಯಂತ ನಡೆಯುತ್ತಿದ್ದ ಕರ್ನಾಟಕ ಏಕೀಕರಣಕ್ಕೆ ಮೊದಲ ಜಯ ಸಿಕ್ಕಿದ್ದು ಬಳ್ಳಾರಿಯಲ್ಲೇ. ಕನ್ನಡಿಗರ ಸತತ ಹೋರಾಟದ ಫಲವಾಗಿ ಬಳ್ಳಾರಿಯನ್ನು 1953ರ ಅಕ್ಟೋಬರ್ 1 ರಂದು, ಅಂದಿನ ಮೈಸೂರು ರಾಜ್ಯದಲ್ಲಿ ವಿಲೀನಗೊಳಿಸುವ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಇದರೊಂದಿಗೆ ಏಕೀಕರಣದ ಪ್ರಕ್ರಿಯೆ ಬಳ್ಳಾರಿಯಿಂದಲೇ ಆರಂಭ ಆಗಿತ್ತು ಎಂದು ತಿಳಿಸಿದರು.


ದೇಶದಲ್ಲಿಯೇ ಅತೀ ಹೆಚ್ಚು ಎಂಟು ಜ್ಞಾನಪೀಠ ಪ್ರಶಸ್ತಿಗಳು ನಮ್ಮ ಕನ್ನಡ ಸಾಹಿತ್ಯಕ್ಕೆ ಲಭಿಸಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ವರ್ಷವಿಡೀ ಕರ್ನಾಟಕ ಸಂಭ್ರಮಾಚರಣೆ: ಮೈಸೂರು ರಾಜ್ಯವು ಕರ್ನಾಟಕ ಎಂದು ಮರುನಾಮಕರಣವಾಗಿ 1ನೇ ನವಂಬರ್ 2023ಕ್ಕೆ 50 ವರ್ಷ ಪೂರ್ಣಗೊಂಡ ಈ ಶುಭ ಸಂದರ್ಭದಲ್ಲಿ ರಾಜ್ಯ ಸರ್ಕಾರವು “ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ” ಎಂಬ ಹೆಸರಿನಲ್ಲಿ ಇಡೀ ವರ್ಷ ಕರ್ನಾಟಕ ಇತಿಹಾಸ, ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ನಾಡು ನುಡಿಗೆ ಸಂಬಂಧಿಸಿದಂತೆ ಮತ್ತು ಯುವ ಜನತೆಯಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕದ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಭವ್ಯ ಪರಂಪರೆ ಹಾಗೂ ಇತಿಹಾಸ ಹೊಂದಿರುವ ಈ ನಮ್ಮ ನಾಡಿಗೆ ನಮ್ಮ ಬಳ್ಳಾರಿ ಜಿಲ್ಲೆಯ ಕೊಡುಗೆ ಅಪಾರವಾಗಿದೆ. ರಾಜ್ಯದಲ್ಲಿಯೇ ಅತ್ಯಂತ ಹೆಚ್ಚು ಖನಿಜ ನಿಕ್ಷೇಪಗಳನ್ನು ಹೊಂದಿರುವ ಜಿಲ್ಲೆಯಾಗಿದ್ದು, ಭೌತಿಕ, ನೈಸರ್ಗಿಕ ಹಾಗೂ ಮಾನವ ಸಂಪನ್ಮೂಲವನ್ನು ಬಳಸಿಕೊಂಡು ಸರ್ವಾಂಗೀಣ ಅಭಿವೃದ್ದಿಗೆ ನಾವೆಲ್ಲರೂ ಶ್ರಮಿಸಲು ಕಂಕಣ ಬದ್ದರಾಗಿ ಈ ನಾಡನ್ನು ಶ್ರೀಮಂತಗೊಳಿಸೋಣ ಎಂದು ಆಶಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಮಾತನಾಡಿ, ಕರ್ನಾಟಕದಲ್ಲಿ ಜನಿಸಿದ ನಾವೆಲ್ಲರೂ ಧನ್ಯರು. ಕೊನೆ ಉಸಿರುವವ ತನಕ ಕನ್ನಡಿಗರಾಗಿಯೇ ಇರೋಣ ಮತ್ತು ಬಾಳೋಣ ಎಂದರು.
ಮುಂಬರುವ ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿ ನಗರದ ಕೋಟೆ ಮೇಲೆ ಅಚ್ಚುಕಟ್ಟಾಗಿ ಧ್ವಜಾರೋಹಣ ನೆರವೇರಿಸಲು ಧ್ವಜಸ್ತಂಭ ಹಾಗೂ ಇತರೆ ವ್ಯವಸ್ಥೆಯನ್ನು ಶಾಸಕರ ಅನುದಾನದಲ್ಲಿ ನಿರ್ಮಿಸಿಕೊಡಲಾಗುವುದು ಎಂದು ಶಾಸಕರು‌ ಹೇಳಿದರು.
ಕಾರ್ಯಕ್ರಮದಲ್ಲಿ, ಪ್ರಬಂಧ ಹಾಗೂ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು.
ಪ್ರಬಂಧ ಸ್ಪರ್ಧೆ: ಅಭಿಷೇಕ್ ನಾಯರ್ (ಪ್ರಥಮ), ನಯನ (ದ್ವಿತೀಯ), ಎಂ.ಡಿ.ಸಾಧಿಕ್ (ತೃತೀಯ).
ಭಾಷಣ ಸ್ಪರ್ಧೆ: ರಶ್ಮಿ (ಪ್ರಥಮ), ಶಿವರಾಜ್ (ದ್ವಿತೀಯ), ವೀಣಾ (ತೃತೀಯ).
ಇದೇ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳು ಪಿಯುಸಿ ವಿಭಾಗದಲ್ಲಿ ಅತ್ಯಂತ ಹೆಚ್ಚು ಅಂಕ ಪಡೆದ ಯಶ್ವಂತ್, ಗೌರಿ, ಅನುಷಾ, ಪದ್ಮಾವತಿ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಣೆ ಮಾಡಲಾಯಿತು.


ಆಕರ್ಷಕ ಸ್ತಬ್ಧ ಚಿತ್ರಗಳ ಮೆರವಣಿಗೆ: ಕನ್ನಡ ರಾಜ್ಯೋತ್ಸವ ಅಂಗವಾಗಿ ಜಿಲ್ಲಾಡಳಿತ ವತಿಯಿಂದ ಏರ್ಪಡಿಸಿದ್ದ ವಿವಿಧ ಇಲಾಖೆಗಳ ಸ್ತಬ್ಧಚಿತ್ರಗಳು ನೋಡುಗರನ್ನು ಆಕರ್ಷಿಸಿದವು.
ಸಚಿವ ಬಿ.ನಾಗೇಂದ್ರ ಅವರು ಸ್ತಬ್ಧ ಚಿತ್ರಗಳ ಮೆರವಣಿಗೆಗೆ ಚಾಲನೆ ನೀಡಿದರು.
ಕೆಕೆಆರ್‍ಟಿಸಿ ನಿಗಮ ವತಿಯಿಂದ ಶಕ್ತಿ ಯೋಜನೆಯ ಕುರಿತ ನಾರಿಮಣಿಯರ ಸ್ತಬ್ಧ ಚಿತ್ರ, ಮಹಾನಗರ ಪಾಲಿಕೆ ವತಿಯಿಂದ ತ್ಯಾಜ್ಯ ನಿರ್ವಹಣೆ ಮತ್ತು ವಿಲೇವಾರಿ ಕುರಿತ ಜಾಗೃತಿ ಫಲಕ, ಆರೋಗ್ಯ ಇಲಾಖೆಯಿಂದ ಆಯುಷ್ಮಾನ್ ಯೋಜನೆಯ ಲಸಿಕೆ ಜಾಗೃತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಗೃಹಲಕ್ಷ್ಮೀ ಯೋಜನೆ ಕುರಿತ ಸ್ತಬ್ಧ ಚಿತ್ರ, ಜೆಸ್ಕಾಂ ಇಲಾಖೆಯಿಂದ ಗೃಹಜ್ಯೋತಿ ಕುರಿತ ಸ್ತಬ್ಧ ಚಿತ್ರ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಸೇರಿದಂತೆ ಒಟ್ಟು 15 ಸ್ತಬ್ಧ ಚಿತ್ರಗಳು ಗಮನ ಸೆಳೆದವು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮೇಯರ್ ಡಿ.ತ್ರಿವೇಣಿ, ಬಳ್ಳಾರಿ ವಲಯ ಪೊಲೀಸ್ ಮಹಾನಿರೀಕ್ಷಕ ಬಿ.ಎಸ್.ಲೋಕೇಶ್ ಕುಮಾರ್, ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಸಹಾಯಕ ಆಯುಕ್ತ ಹೇಮಂತ್ ಕುಮಾರ್, ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರಾ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಶಾಲಾ ಮಕ್ಕಳು, ವಿವಿಧ ಕನ್ನಡ ಪರ ಸಂಘಟನೆಗಳು ಉಪಸ್ಥಿತರಿದ್ದರು.
——–