ನಾಡದೇವಿ ಭುವನೇಶ್ವರಿ ಹೆಸರಿನಲ್ಲಿ ಬೆಂಗಳೂರಿನಲ್ಲಿ ಬೃಹತ್ ಕನ್ನಡ ಭವನ ನಿರ್ಮಾಣ -ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ

ಬೆಂಗಳೂರು, ನ.2 : ಕರ್ನಾಟಕ ಸಂಭ್ರಮ 50ರ ಸವಿನೆನಪಿಗಾಗಿ ನಾಡದೇವಿ ಭುವನೇಶ್ವರಿ ಹೆಸರಿನಲ್ಲಿ ದೊಡ್ಡ ಕನ್ನಡ ಭವನವನ್ನು ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.
ಅವರು ಬುಧವಾರ ಸಂಜೆ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
1956ರ ನವೆಂಬರ್ 1 ರಂದು ಕನ್ನಡ ಭಾಷಿಕ ಪ್ರದೇಶಗಳು ಏಕೀಕರಣಗೊಂಡು ಮೈಸೂರು ರಾಜ್ಯ ಉದಯವಾಯಿತು‌. ನಂತರ 1973ರಲ್ಲಿ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಅವರ ಅವಧಿಯಲ್ಲಿ ಮೈಸೂರು ರಾಜ್ಯವನ್ನು ‘ಕರ್ನಾಟಕ’ ಎಂದು ಮರು ನಾಮಕರಣ ಮಾಡಲಾಯಿತು ಎಂದರು.
ಕನ್ನಡದ ಹಿರಿಮೆ ಬಿಂಬಿಸುವ ಕರ್ನಾಟಕ ಸಂಭ್ರಮ – 50: ಕರ್ನಾಟಕಕ್ಕೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಈ ಹಿಂದಿನ ಸರ್ಕಾರ ಸಂಭ್ರಮಾಚರಣೆ ಮಾಡಬೇಕಿತ್ತು. ಆದರೆ ಅವರು ಆಚರಿಸಲಿಲ್ಲ. ನಮ್ಮ ಸರ್ಕಾರ ಈ ಸಂಭ್ರಮಾಚರಣೆಯನ್ನು ಆಚರಿಸುವುದು ನಮ್ಮ ಕರ್ತವ್ಯವೆಂದು ಭಾವಿಸಿ, ಇಡೀ ವರ್ಷಕನ್ನಡ ನೆಲ, ಜಲ ಸಾಹಿತ್ಯ, ಸಂಸ್ಕೃತಿ, ಪರಂಪರೆಗಳನ್ನು ಬಿಂಬಿಸುವ ‘ಕರ್ನಾಟಕ ಸಂಭ್ರಮ- 50’ ಕಾರ್ಯಕ್ರಮಗಳನ್ನು ಸರ್ಕಾರ ರೂಪಿಸಿದೆ. ‘ಹೆಸರಾಯಿತು ಕರ್ನಾಟಕ- ಉಸಿರಾಗಲಿ ಕನ್ನಡ’ ಎಂಬ ಘೋಷ ವಾಕ್ಯದಡಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನಮ್ಮ ಉಸಿರು ಕನ್ನಡವಾಗಬೇಕು. ಇಡೀ ರಾಜ್ಯದಲ್ಲಿ ಕನ್ನಡದ ವಾತಾವರಣ ನಿರ್ಮಾಣವಾಗಬೇಕು ಎಂದು ತಿಳಿಸಿದರು.

ಅವಕಾಶ ವಂಚಿತರು ಮುಖ್ಯವಾಹಿನಿಗೆ ಬರಬೇಕು:
ವಚನಗಳು ಭಾರತಕ್ಕೆ ಮಾತ್ರವಲ್ಲ. ಇಡೀ ವಿಶ್ವಕ್ಕೆ ಅಗತ್ಯ. ಜಾತಿ ವ್ಯವಸ್ಥೆ ಕಾರಣಕ್ಕಾಗಿ, ಸಾಮಾಜಿಕ, ಆರ್ಥಿಕ, ರಾಜಕೀಯ ಅಸಮಾನತೆ ನಿರ್ಮಾಣವಾಗಿದೆ. ಶತಮಾನಗಳಿಂದ ಶೂದ್ರರು ಹಾಗೂ ಮಹಿಳೆಯರು ಶಿಕ್ಷಣ ಸಂಸ್ಕೃತಿಯಿಂದ ವಂಚಿತರಾಗಿದ್ದರು.ಸಮ ಸಮಾಜ ನಿರ್ಮಾಣವಾಗಬೇಕಾದರೆ ಅವಕಾಶವಂಚಿತರು, ದುರ್ಬಲರು ಮುಖ್ಯವಾಹಿನಿಗೆ ಬರಬೇಕು. ಅಂತಹ ಜನರನ್ನು ಗುರುತಿಸಿ, ಸಾಮಾಜಿಕ, ಆರ್ಥಿಕ ನ್ಯಾಯ ಕೊಡುವ ಬಗ್ಗೆ ಸಂವಿಧಾನದಲ್ಲಿ ಉಲ್ಲೇಖಿಸಲಾಗಿದೆ ಎಂದರು.
ವಚನ ಸಂಸ್ಕೃತಿ ಅಭಿಯಾನ : ಅಸಮಾನತೆ ಇರುವ ಸಮಾಜದಲ್ಲಿ ಕೇವಲ ರಾಜಕೀಯ ಸ್ವಾತಂತ್ರ್ಯವಲ್ಲ. ಪ್ರತಿಯೊಬ್ಬರಿಗೂ ಸಾಮಾಜಿಕ, ಆರ್ಥಿಕ ಸ್ವಾತಂತ್ರ್ಯ ಸಿಕ್ಕಾಗ ಮಾತ್ರ ಸ್ವಾತಂತ್ರ್ಯ ಸಾರ್ಥಕವಾಗುತ್ತದೆ. ಇಂತಹ ಆಶಯಗಳನ್ನೇ ಬಸವಣ್ಣನವರು, ಅಂಬೇಡ್ಕರ್ ರವರು ತಿಳಿಸಿದರು. ಶ್ರೀ ನಿಜಗುಣ ಸ್ವಾಮೀಜಿ ಅವರು ಹೇಳಿದಂತೆ ವಚನ ಸಂಸ್ಕೃತಿ ಅಭಿಯಾನ ಸರ್ಕಾರ ಹಮ್ಮಿಕೊಳ್ಳಲಿದೆ ಎಂದು ತಿಳಿಸಿದರು.
ಶಕ್ತಿಯಿಲ್ಲದವರಿಗೆ ಶಕ್ತಿ ತುಂಬುವ ಯೋಜನೆಗಳು :
ಸರ್ಕಾರದ ಪಂಚಗ್ಯಾರಂಟಿ ಯೋಜನೆಗಳಲ್ಲೊಂದಾದ ಶಕ್ತಿ ಯೋಜನೆಯಡಿ 86 ಕೋಟಿ ಮಹಿಳೆಯರು ಸರ್ಕಾರಿ ಬಸ್ ನಲ್ಲಿ ಉಚಿತ ಪ್ರಯಾಣ ಮಾಡಿದ್ದಾರೆ. ಶಕ್ತಿ ‌ಇರುವವರಿಗೆ ಶಕ್ತಿ ಕೊಡುವುದಲ್ಲ. ಶಕ್ತಿ ಇಲ್ಲದವರಿಗೆ ಶಕ್ತಿ ತುಂಬ ಬೇಕೆನ್ನುವುದೇ ಪಂಚ ಗ್ಯಾರಂಟಿ ಯೋಜನೆಗಳ ಉದ್ದೇಶ ಎಂದರು.


ಸಮಾಜಸೇವೆಯ ಮೂಲಕ ಋಣ ತೀರಿಸಲು ಸಾಧ್ಯ :
ಪ್ರೀತಿ, ವಿಶ್ವಾಸ, ಮನುಷ್ಯತ್ವ ಬಹಳ ಮುಖ್ಯ. ಮನುಷ್ಯತ್ವ ಇಲ್ಲದಿದ್ದರೆ ಅದು ಸಮಾಜವೇ ಅಲ್ಲ. ನಾವೆಲ್ಲರೂ ಕೂಡ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ಕೊಟ್ಟರೆ ಮಾತ್ರ ಬದುಕು ಸಾರ್ಥಕವಾಗುತ್ತದೆ. ನಾವು ಹುಟ್ಟಿದ ಮೇಲೆ ಸಮಾಜದಿಂದ ಎಲ್ಲವನ್ನೂ ಪಡೆದಿದ್ದೇವೆ ಎಂದ ಮೇಲೆ , ಸಮಾಜದ ಪರ ಕೆಲಸ ಮಾಡುವ ಮೂಲಕ ಸಮಾಜದ ಋಣ ತೀರಿಸಲು ಸಾಧ್ಯ. ಇಂತಹ ಕೆಲಸವೇ ಸಮಾಜ ಸೇವೆ ಎಂದರು.
ಅರ್ಹತೆಯುಳ್ಳವರಿಗೆ ಪ್ರಶಸ್ತಿ : ಕರ್ನಾಟಕ ಸಂಭ್ರಮದ ಶುಭಸಂದರ್ಭದಲ್ಲಿ ಪ್ರಶಸ್ತಿಗೆ ಭಾಜನರಾಗಿರುವ ಎಲ್ಲ 68 ಪ್ರಶಸ್ತಿ ಪುರಸ್ಕೃತರ ಸಾಧನೆ ಎಲ್ಲರಿಗೂ ಮಾದರಿಯಾಗಿದೆ. ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಈ ಬಾರಿ 10 ಸಂಘ- ಸಂಸ್ಥೆಗಳಿಗೆ ಈ ವಿಶೇಷವಾಗಿ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ. ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗೆ ಹೆಚ್ಚು ಅರ್ಹತೆ ಇದ್ದವರನ್ನು ಆಯ್ಕೆ ಮಾಡಬೇಕೆಂಬ ಸೂಚನೆಯನ್ನು ನೀಡಲಾಗಿತ್ತು. ರಾಜ್ಯದ ಮುಖ್ಯಮಂತ್ರಿಯಾಗಿ ನಾನು ಒಂದು ಹೆಸರನ್ನು ಬಿಟ್ಟು ಬೇರೆ ಯಾರ ಹೆಸರನ್ನು ನಾನು ಸೂಚಿಸಿಲ್ಲ‌. ಬಹುತೇಕವಾಗಿ ಆಯ್ಕೆ ಸಮಿತಿ ಶಿಫಾರಸ್ಸು ಮಾಡಿದವರಿಗೆ ಪ್ರಶಸ್ತಿ ನೀಡಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗೃಹ ಸಚಿವ ಡಾ.‌ಜಿ. ಪರಮೇಶ್ವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ತಂಗಡಗಿ ಮಾತನಾಡಿದರು.
ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವರಾದ ಭೈರತಿ ಸುರೇಶ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.            *****