ನಾನು ಹೊರಟಿದ್ದೇನೆ…
ನಾನು ಹೊರಟಿದ್ದೇನೆ
ಬುದ್ದನತ್ತ
ಹೌದು
ನಿಮ್ಮನ್ನು ಕರೆಯಲಾರೆ ನಾನು
ಹಾಗೆಂದುಕೊಳ್ಳದಿರಿ ನೀವು
ನಿಮಗೂ ಬುದ್ದನ ತುರ್ತು ಅನಿವಾರ್ಯವಿದೆ
ನಿಮಗೆ ಹಾಗೆ ಅನಿಸಿದ್ದೆ ಆದರೆ
ಈಗಲೇ ಬಂದುಬಿಡಿ
ನಾನು ಹೊರಟಿದ್ದೇನೆ ಬುದ್ದನತ್ತ…
ಯಾಕೆ ಈ ಮೇಲುಕೀಳಿನ
ಜಾತಿದೌರ್ಜನ್ಯದ ಕೊಚ್ಚೆಯಲ್ಲಿ
ಬಿದ್ದು ಸಾಯಲು ಇಷ್ಟಪಡಬೇಕು
ನಮಗೂ ನಮ್ಮದೆ ಬದುಕಿನ
ನೆಮ್ಮದಿಯ ನಿಟ್ಟುಸಿರು ಬೇಕು ತಾನೆ
ಅದಕ್ಕೆ ನಾನಂತೂ ನನ್ನ ಅಚಲ ನಿರ್ಧಾರವ ಕೈಗೊಂಡು ಈಗಲೆ ಹೊರಟಿದ್ದೇನೆ
ಬರುವವರು ಬರುವುದು ಸೂಕ್ತ…
ಈ ಅಸಮತೆಯ ಗಿಡಕ್ಕೆ ನೀರೆರೆದು
ಪೋಷಿಸುವವರಿಂದ ದೂರವಾಗಿ
ನನ್ನದೇ ಬದುಕಿನ ಸಮತೆಯ ಭೋಧಿಮರದಡಿ
ಎಲ್ಲರೊಡಗೂಡಿ ಬಾಳಲು
ನಾನು ಹೊರಟಿದ್ದೇನೆ
ಬುದ್ದನತ್ತ…
ಯುದ್ದವಿಲ್ಲ ಬುದ್ದನಲ್ಲಿ
ಪ್ರೀತಿಯ ಹೂ ಗಿಡ ಬಳ್ಳಿಗಳೇ
ನಮ್ಮ ತಬ್ಬಿಕೊಳ್ಳುವ ಕೈಗಳು ಅಲ್ಲಿ
ಯಾರಿಗೆಬೇಕು ನಮ್ಮನ್ನು ದೂರವೇ ಇಟ್ಟ
ಈ ಮಲೀನ ವ್ಯವಸ್ಥೆಯ ಅವ್ಯವಸ್ಥೆ
ಶೋಷಣೆಯ ದುರಾವಸ್ಥೆ
ಅದಕ್ಕೆ ನಾನು ಈ ಸಾಮಾಜಿಕ ಕಟ್ಟುಪಾಡುಗಳ ದಾಟಿ
ಹೊರಟಿದ್ದೇನೆ ಬುದ್ದನತ್ತ…
-ಸಿದ್ದುಜನ್ನೂರ್, ಚಾಮರಾಜ ನಗರ
—–