ಅನುದಿನ ಕವನ-೧೦೪೧, ಕವಿ:ಡಾ.ದಸ್ತಗೀರಸಾಬ್ ದಿನ್ನಿ, ಬಳ್ಳಾರಿ, ಕಾವ್ಯ ಪ್ರಕಾರ: ತರಹೀ ಗಜಲ್ 

ತರಹೀ ಗಜಲ್
ಮಿಸ್ರಾ : ಅರುಣಾ ನರೇಂದ್ರ
(ಹೃದಯದ ಖಾನೆಯಲಿ…)

ಹೃದಯದ ಖಾನೆಯಲಿ ನನ್ನ ಬಂಧಿಸು
‌ತೋಳಿನ ಬಿಸುಪಿನಲಿ  ನನ್ನ ಮರೆಸು.

ತುಂಟ ಮಾತಲಿ ಕೆನ್ನೆ ಸವರು
ಇಬ್ಬನಿಯ ಹಾದಿಯಲಿ ನನ್ನ ಕುಣಿಸು .

ಮುನಿದು ಪ್ರತಿ ಗಳಿಗೆಯನು ಆಳಬೇಡ
ಅಧರಗಳ ಮುತ್ತಿನಲಿ ನನ್ನ ನಲಿಸು .

ಹೊಳೆವ ಚುಕ್ಕೆಗಳನು ಒಮ್ಮೆ ನೋಡು
ಮೋಹಗೊಂಡ ಇರುಳಲಿ ನನ್ನ ಬೆರೆಸು .

ವಸಂತನಿಗೆ ಚೆಲುವು ಕೊಟ್ಟ ಚೆಲುವಿ
ಕಣ್ಣ ದಿಟ್ಟಿಯಲಿ ನನ್ನ ನಗಿಸು .

ಹೂಬಿಸಿಲು ಕಣ್ಣ ಮಿಟುಕಿಸುತ ತಬ್ಬುತಿದೆ
ಶರಧಿಯ ತೀರದಲಿ ನನ್ನ ಅಲೆಸು .

ಒಂಟಿ ಕ್ಷಣಗಳು  ಅಲಗಾಗಿ ಇರಿಯುತಿವೆ
ಮತ್ತಿನ ಮಾತಿನಲಿ ನನ್ನ ಉಲಿಸು .

ಎದೆಯ ಉಸಿರ ಕವಿತೆ ನೀನು
ವಿರಹದ ಉರಿಯಲಿ ನನ್ನ ಬೇಯಿಸು .


-ಡಾ.ದಸ್ತಗೀರಸಾಬ್ ದಿನ್ನಿ, ಬಳ್ಳಾರಿ
*****