ಬಳ್ಳಾರಿ, ನ.8: ಯುವಶಕ್ತಿಯನ್ನು ಇ-ಟೆಕ್ನಾಲಜಿಗೆ ಸಿದ್ಧಗೊಳಿಸುವ ಜವಾಬ್ದಾರಿಯನ್ನು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ಯಶಸ್ವಿಯಾಗಿ ನಿರ್ವಹಿಸುತ್ತಿದೆ ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯ ವಿಶ್ರಾಂತ ಪ್ರಾಧ್ಯಾಪಕ ಡಾ. ಎಸ್. ಜಯಣ್ಣ ಅವರು ತಿಳಿಸಿದ್ದಾರೆ.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಬಳ್ಳಾರಿ ಚೇಂಬರ್ ಕೌಶಲ್ಯಾಭಿವೃದ್ಧಿ ಕೇಂದ್ರದ ವಿದ್ಯಾರ್ಥಿಗಳ ಬೀಳ್ಕೊಡುಗೆ ಮತ್ತು ಕೌಶಲ್ಯದ ಸದ್ಭಳಕೆಯ ಕುರಿತು ಸಭಾಭವನದಲ್ಲಿ ಬುಧವಾರ ನಡೆದ `ಸ್ಫೂರ್ತಿ’ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು. ಮಾಹಿತಿ – ತಂತ್ರಜ್ಞಾನದ ಈ ಯುಗದಲ್ಲಿ ಇ-ಟೆಕ್ನಾಲಜಿ ಪ್ರತಿಯೊಬ್ಬರ ಬದುಕಿನ ಅವಿಭಾಜ್ಯವಾಗಿದೆ. ಮಾಹಿತಿ ಮತ್ತು ತಂತ್ರಜ್ಞಾನ ವೃತ್ತಿಯಲ್ಲಿಯ ಕೌಶಲ್ಯ-ಪರಿಣತಿ ಮತ್ತು ಅನುಭವ ಯಶಸ್ವಿನ ಸೂತ್ರಗಳಾಗಿವೆ. ಉದ್ಯೋಗಿಗಳು ವೃತ್ತಿಯಲ್ಲಿ ತ್ವರಿತವಾಗಿ ಹೊಂದಿಕೊಂಡು ಯಶಸ್ಸನ್ನು ಸಾಧಿಸಲು ತಂತ್ರಜ್ಞಾನದ ಮಾಹಿತಿ ಮತ್ತು ತಂತ್ರಜ್ಞಾನದ ಬಳಕೆಯ ಕೌಶಲ್ಯಗಳು ಅಗತ್ಯ ಎಂದರು.
ಕಾಮರ್ಸ್ ವಿದ್ಯಾರ್ಥಿಗಳಿಗೆ ತರಗತಿಗಳಲ್ಲಿ ಪಠ್ಯಕ್ಕೆ ಸೀಮಿತವಾಗಿ ಬರೀ ಲೆಕ್ಕಾಚಾರದ ಜ್ಞಾನವನ್ನು ಮಾತ್ರ ನೀಡಲಾಗುತ್ತಿದೆ. ಆದರೆ, ವೃತ್ತಿಯಲ್ಲಿ ಜ್ಞಾನ, ತಂತ್ರಜ್ಞಾನದ ಬಳಕೆ ಮತ್ತು ಕೌಶಲ್ಯವು ಅತ್ಯಗತ್ಯ. ಇಂಥಹಾ ಕೌಶಲ್ಯವನ್ನು ಅತ್ಯಲ್ಪ ಅವಧಿಯಲ್ಲಿ ನೀಡಿ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವನ್ನು ರೂಪಿಸುವ ಜ್ಞಾನವನ್ನು ಬಳ್ಳಾರಿ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಸ್ಕಿಲ್ಸೆಂಟರ್ ಮೂಲಕ ತರಬೇತಿ ನೀಡುತ್ತಿರುವುದು ಶ್ಲಾಘನೀಯ ಎಂದರು.
ಬಳ್ಳಾರಿ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಗೌರವಾಧ್ಯಕ್ಷ ಸಿ. ಶ್ರೀನಿವಾಸರಾವ್ ಅವರು, ಬಳ್ಳಾರಿ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ನ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ನಲ್ಲಿ ಕಂಪ್ಯೂಟರ್ ಮತ್ತು ಟ್ಯಾಲಿ ಬಳಕೆಯ ಪ್ರಾಥಮಿಕ ಕೌಶಲ್ಯಗಳನ್ನು ಕಲಿಸಲಾಗುತ್ತಿದೆ. ಟ್ಯಾಲಿಯನ್ನು ನಿರಂತರ ಬಳಕೆ ಮಾಡಿ ಹೆಚ್ಚಿನ ಅನುಭವ ಪಡೆದಲ್ಲಿ ಅಕೌಂಟೆಂಟ್ ವೃತ್ತಿಯಲ್ಲಿ ಗೌರವ, ಕೀರ್ತಿ ಮತ್ತು ಪ್ರಭಾವ ಹೆಚ್ಚಲಿದೆ ಎಂದರು. ಬಳ್ಳಾರಿ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಹಿರಿಯ ಉಪಾಧ್ಯಕ್ಷರು ಮತ್ತು ಸ್ಕಿಲ್ ಸೆಂಟರ್ನ ಚೇರ್ಮೆನ್ ಯಶವಂತರಾಜ್ ನಾಗಿರೆಡ್ಡಿ ಅವರು ಕಾರ್ಯಕ್ರಮ ನಿರೂಪಿಸಿ, ಸ್ಕಿಲ್ ಸೆಂಟರ್ನ ಕಲ್ಪನೆ, ವೃತ್ತಿ ನೈಪುಣ್ಯತೆ ಮತ್ತು ಅನೇಕರ ಭವಿಷ್ಯ ರೂಪಿಸುವಲ್ಲಿ ನಿರ್ವಹಿಸುತ್ತಿರುವ ಜವಾಬ್ದಾರಿ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಿಬಿರಾರ್ಥಿಗಳು ಡಾ. ಎಸ್. ಜಯಣ್ಣ ಅವರೊಂದಿಗೆ ವೃತ್ತಿ ಮತ್ತು ಕೌಶಲ್ಯದ ಬಳಕೆಯ ಸವಾಲುಗಳ ಕುರಿತು ಚರ್ಚೆ ನಡೆಸಿದರು. ಬಳ್ಳಾರಿ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ. ಮಹಾರುದ್ರಗೌಡ ಅವರು ಸ್ವಾಗತ ಕೋರಿದರು. ಕೌಶಲ್ಯಾಭಿವೃದ್ಧಿ ಕೇಂದ್ರದ ಉದ್ಯೋಗ ಸಮಿತಿಯ ಚೇರ್ಮೆನ್ ನಾಗಳ್ಳಿ ರಮೇಶ್ ಅವರು ವಂದನಾರ್ಪಣೆ ಸಲ್ಲಿಸಿದರು. ಗೌರವ ಕಾರ್ಯದರ್ಶಿ ಕೆ.ಸಿ. ಸುರೇಶಬಾಬು, ಜಂಟಿ ಕಾರ್ಯದರ್ಶಿ ಡಾ. ಮರ್ಚೇಡ್ ಮಲ್ಲಿಕಾರ್ಜುನ, ಉಪಾಧ್ಯಕ್ಷ ಗಿರಿಧರ ಸೊಂತ ವೇದಿಕೆಯಲ್ಲಿದ್ದರು.