ಅನುದಿನ ಕವನ-೧೦೪೪, ಕವಿ: ಮಲ್ಲಿಕಾರ್ಜುನಗೌಡ ತೂಲಹಳ್ಳಿ. ದಾವಣಗೆರೆ

ನದಿ ಹರಿಯುತ್ತಲೇ ಇದೆ
ಪಾತ್ರ ಹಸಿಯಾಗುತ್ತಿಲ್ಲ.

ಈ ದಾರಿ
ಬೇಡಿ ಪಡೆದದ್ದಲ್ಲ.
ಹಿಂತಿರುಗುವುದು
ಸಾಧ್ಯವೇ ಇಲ್ಲ.

ಕಾಡೊಳಗೆ ಕತ್ತಲಾಗಿ,
ಎಲೆಗಳ ಮಿದುವಲಿ ಬೆರೆತು
ಹಸಿರಾಗಿ,
ಹಗಲಿಗೆ ಕಣ್  ಮಿಟುಕಿಸಿ
ಕಾಮನಬಿಲ್ಲಾಗಿ,
ತುಂಬು ತೋಳುಗಳ ನಡುವೆ
ಉಕ್ಕೇರುವ
ಕಾಲ
ಬರದೆ
ಹರಿಯುತ್ತಿದೆ ನೀರಾಗಿ
ಯಾವುದಕ್ಕೂ ತಾಗದೆ.

ಅವರಿವರ ಬೊಗಸೆಗಳ
ತುಂಬುತ್ತಲೇ ಇದೆ ಬೆಳಕು.
ಚಿಟ್ಟೆಗಳ ಸೆಳೆದು
ಮುತ್ತಿಕ್ಕುತ್ತಿವೆ ಹೂವು.
ಕಾಡ ಕರಗಿಸಿ
ಹಚ್ಚೆ ಹೊಯ್ದುಕೊಂಡಿವೆ ಹಕ್ಕಿ.
ಕೈ ತಪ್ಪಿದ ಹಾಳೆಯಂತೆ
ಕಣ್ಣೆದುರೇ
ಎಲ್ಲ ಗಾಳಿಪಾಲು.
       -ಮಲ್ಲಿಕಾರ್ಜುನಗೌಡ ತೂಲಹಳ್ಳಿ. ದಾವಣಗೆರೆ

*****