ಬಳ್ಳಾರಿ,ನ.11: ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ವಿವಿಧೆಡೆ ಸಂಚರಿಸಿ ಬರ ಪರಿಸ್ಥಿತಿ ವೀಕ್ಷಣೆ ನಡೆಸಿದ ಯುವ ಸಬಲೀಕರಣ, ಕ್ರೀಡೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು, ಜಿಲ್ಲೆಯಲ್ಲಿ ಒಟ್ಟು ಶೇ.82 ಭಾಗದಷ್ಟು ಮಳೆಯಿಲ್ಲದೇ ಬೆಳೆ ಹಾನಿ, ಬರ ನಷ್ಟ ಸೇರಿದಂತೆ ಜಿಲ್ಲೆಗೆ ಒಟ್ಟು ರೂ.560 ಕೋಟಿ ಬರ ಪರಿಹಾರದ ಮಾಹಿತಿಯನ್ನು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು. ಅವರು ಶನಿವಾರ ಸಂಜೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಬರ ಪರಿಸ್ಥಿತಿ ಕುರಿತು ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಮುಖ್ಯ ಮಂತ್ರಿಗಳು, ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರ ಸೂಚನೆಯಂತೆ, ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಅವಲೋಕಿಸಿ, ಇದೇ ತಿಂಗಳ ನ.15 ರೊಳಗಾಗಿ ಅಂತಿಮ ವರದಿ ಸಲ್ಲಿಸುವಂತೆ ನಿರ್ದೇಶಿಸಿದ್ದಾರೆ. ಈ ನಿಟ್ಟಿನಲ್ಲಿ ಬರ ಪರಿಸ್ಥಿತಿ ವೀಕ್ಷಣೆ ನಡೆಸಲಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ 63,765 ಹೆಕ್ಟೇರ್ ಭೂಮಿ ಸಾಗುವಳಿ ಕ್ಷೇತ್ರವಾಗಿದ್ದು, ಈ ವರ್ಷದ ಮಂಗಾರು ಮಳೆ ಅಭಾವದಿಂದ ಕೇವಲ 1,10,436 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಅಂದರೆ ಶೇ.82ರಷ್ಟು ಮಾತ್ರ ಬಿತ್ತನೆಯಾಗಿದೆ. ಜಿಲ್ಲೆಯಲ್ಲಿ 573 ಮಿ.ಮೀ ವಾಡಿಕೆ ಮಳೆಯಿದ್ದು, ಕೇವಲ 261 ಮೀ.ಮೀ ಪ್ರಮಾಣದಷ್ಟು ಮಳೆಯಾಗಿದೆ ಎಂದು ಸಚಿವರು ತಿಳಿಸಿದರು.
ತಾಲ್ಲೂಕುವಾರು ಬರ ಪರಿಸ್ಥಿತಿ ಮಾಹಿತಿ: ಸಿರುಗುಪ್ಪ ತಾಲ್ಲೂಕಿನಲ್ಲಿ ಒಟ್ಟು 56,406 ಹೆಕ್ಟೇರ್ ಬಿತ್ತನೆಯಲ್ಲಿ 36,281 ಹೆಕ್ಟೇರ್ ಪ್ರದೇಶ ಬರ ಮತ್ತು ಹಾನಿ.
ಕಂಪ್ಲಿ ತಾಲ್ಲೂಕಿನಲ್ಲಿ 20,310 ಹೆಕ್ಟೇರ್ ಬಿತ್ತನೆಯಲ್ಲಿ 656 ಹೆಕ್ಟೇರ್ ಪ್ರದೇಶ ಬರ ಮತ್ತು ಹಾನಿ.
ಕುರುಗೋಡು ತಾಲ್ಲೂಕಿನಲ್ಲಿ 12,612 ಹೆಕ್ಟೇರ್ ಬಿತ್ತನೆಯಲ್ಲಿ 260 ಹೆಕ್ಟೇರ್ ಪ್ರದೇಶ ಬರ ಮತ್ತು ಹಾನಿ.
ಸಂಡೂರು ತಾಲ್ಲೂಕಿನಲ್ಲಿ 30,111 ಹೆಕ್ಟೇರ್ ಬಿತ್ತನೆಯಲ್ಲಿ 26,600 ಹೆಕ್ಟೇರ್ ಪ್ರದೇಶ ಬರ ಮತ್ತು ಹಾನಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ವಿವರಿಸಿದರು.
ಜಿಲ್ಲೆಗೆ ಈಗಾಗಲೇ ಕೇಂದ್ರ ಬರ ಅಧ್ಯಯನ ತಂಡವು ಸಮೀಕ್ಷೆ ನಡೆಸಿದೆ. ಎನ್.ಡಿ.ಆರ್.ಎಫ್ ಮಾರ್ಗಸೂಚಿ ಅನ್ವಯದಂತೆ 1 ಹೆಕ್ಟೇರ್ ಪ್ರದೇಶದ ಖುಷ್ಕಿ ಬೆಳೆಗೆ ರೂ.8,500 ಪರಿಹಾರ, 1 ಹೆಕ್ಟೇರ್ ಪ್ರದೇಶದ ನೀರಾವರಿ ಬೆಳೆಗೆ ರೂ.17,000 ಪರಿಹಾರ, 1 ಹೆಕ್ಟೇರ್ ಪ್ರದೇಶದ ಬಹುವಾರ್ಷಿಕ ಬೆಳೆಗೆ ರೂ. 22,000 (ತೋಟಗಾರಿಕೆ ಬೆಳೆಗಳಿಗೆ) ಪರಿಹಾರ ನಿಗದಿಪಡಿಸಿದೆ ಎಂದು ವಿವರಿಸಿದರು.
ಸಿರುಗುಪ್ಪ ತಾಲ್ಲೂಕಿನಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ, ಭತ್ತದ ಬೆಳೆ ನೆಲಕ್ಕುರುಳಿದೆ, ಇದಕ್ಕೂ ಪರಿಹಾರ ಒದಗಿಸಲು ಕೃಷಿ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ವರದಿ ನೀಡಲಿದ್ದಾರೆ ಎಂದರು.
ಜಿಲ್ಲೆಯಲ್ಲಿ ಏಪ್ರಿಲ್ ನಿಂದ ಇಲ್ಲಿಯವರೆಗೆ 4 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರಿಗೆ ಈಗಾಗಲೇ ಪರಿಹಾರ ಒದಗಿಸಲಾಗಿದೆ ಎಂದು ಕೃಷಿ ಜಂಟಿ ನಿರ್ದೇಶಕ ಕೆ.ಮಲ್ಲಿಕಾರ್ಜುನ ಅವರು ತಿಳಿಸಿದರು.
ಮೋಡ ಬಿತ್ತನೆ ಚಿಂತನೆ ಇಲ್ಲ: ಜಿಲ್ಲೆಯಲ್ಲಿ ಭತ್ತದ ಬೆಳೆಯು ಸಾಕಷ್ಟು ಪ್ರಮಾಣದಲ್ಲಿ ಬೆಳೆಯಲಾಗಿದೆ. ಬೆಳೆಯು ತೆನೆ ಬಿಟ್ಟಿರುವ ಹಂತದಲ್ಲಿದೆ. ಜಾಸ್ತಿ ಮಾಳೆಯಾದರೆ, ಭತ್ತ ನೆಲಕ್ಕುರುಳುವ ಸಂಭವವಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಯಾವುದೇ ಮೋಡ ಬಿತ್ತನೆ ಚಿಂತೆ ನಡೆಸಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ ಸಚಿವರು ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಪರಿಸರ ಸ್ನೇಹಿ ದೀಪಾವಳಿ ಆಚರಿಸಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
——