ಅನುದಿನ ಕವನ-೧೦೪೫, ಕವಿ: ಎ.ಎನ್.ರಮೇಶ್. ಗುಬ್ಬಿ., ಕವನದ ಶೀರ್ಷಿಕೆ: ಅರಿಕೆ..!

“ಇದು ಬರಿದೆ ದ್ವಿರುಕ್ತಿ, ದ್ವಿಪದಿಗಳ ಕವಿತೆಯಲ್ಲ. ಆಂತರ್ಯ ಬೆಳಗುವ ಬಾಳಸೂಕ್ತಿಗಳ ನಿತ್ಯ ಸತ್ಯ ಭಾವಗೀತೆ. ಪ್ರತಿ ಸಾಲಿನಲ್ಲೂ ಜೀವಸೂತ್ರ ಹಿಡಿದ ವಿಧಾತನಿಗೊಂದು ವಿನಂತಿಯಿದೆ. ಅರಿವಿನಾ ಹರಿವಿಟ್ಟು ಜೀವನಯಾನ ದಡ ಸೇರಿಸಲೆಂಬ ಆರ್ದ್ರ ಪ್ರಾರ್ಥನೆಯಿದೆ. ಆ ಅಗೋಚರನೆದುರು ಜೀವಭಾವಗಳ ಬೇಡಿಕೆಯಿದು. ಆ ಅಚ್ಯುತನೆದುರು ನಮ್ಮ ನಿಮ್ಮದೇ ಆಂತರ್ಯಗಳ ಅನುಕ್ಷಣದ ಅರಿಕೆಯಿದು. ಏನಂತೀರಾ.?”                     -ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.

ಅರಿಕೆ..!

ಕೊಟ್ಟ ಕರಗಳಿಗೆ ಮರೆವು ಕೊಡು
ಪಡೆದ ಕೈಗಳಿಗೆ ನೆನಪು ಇಡು.!

ಗೆದ್ದ ತಲೆಗೆ ವಿನಯ ಕೊಡು
ಸೋತ ಶಿರಕೆ ಸ್ಥೈರ್ಯ ನೀಡು.!

ಸಿಟ್ಟಿನಲ್ಲಿ ಸ್ವಲ್ಪ ಸಹನೆ ಕೊಡು
ಹಗೆಗಳೆದುರೂ ಸೈರಣೆ ಇಡು.!

ಸ್ವಾರ್ಥ ಸೇಡಿನಲಿ ಕರುಣೆ ಕೊಡು
ಕ್ರೌರ್ಯದೆದುರೂ ಕ್ಷಮೆಯ ನೀಡು.!

ಉತ್ಸಾಹದೊಳಗೆ ಸಮಚಿತ್ತ ಕೊಡು
ಉನ್ಮಾದದೊಳಗೆ ಎಚ್ಚರ ಇಡು.!

ಕಷ್ಟ ಸಂಕಷ್ಟಗಳಲಿ ಅರಿವು ಕೊಡು
ಸುಖ ಸಂಭ್ರಮಗಳಲಿ ಸ್ಮರಣೆ ನೀಡು.!

ಮೆರೆಯದಂತೆ ಹಗ್ಗದಿ ಕಟ್ಟಿಬಿಡು
ಕುಸಿಯದಂತೆ ಬಿಗಿದು ಗಟ್ಟಿಮಾಡು.!

ಪಾತಾಳದಿ ಏಳುವ ದಿಟ್ಟತೆ ಕೊಡು
ಶೃಂಗದಿ ಜಾರದ ದೃಢತೆ ಇಡು.!

ದಿಕ್ಕು ತಪ್ಪದಂತೆ ಗುರಿಯ ಕೊಡು
ಗಮ್ಯದೆಡೆ ನಡೆವ ಶಕುತಿ ನೀಡು.!

ಜೀವಕೆ ಸನ್ಮತಿ ಸಾರ್ಥಕತೆ ಕೊಡು
ಜೀವನಕೆ ಅರ್ಥ ಸಾಫಲ್ಯತೆ ಇಡು

ಬದುಕಿನ ಸದ್ಗತಿ ಸಂಪ್ರೀತಿ ಕೊಡು
ಬೆಳಕಿನಾ ಸಾಮಿಪ್ಯ ಸಾನಿಧ್ಯ ನೀಡು.!

-ಎ.ಎನ್.ರಮೇಶ್. ಗುಬ್ಬಿ.