ದೀಪಾವಳಿ ಎಂದರೆ
ಬರೀ ಹಚ್ಚಿರುವ ಹಣತೆಯಲ್ಲ
ಪ್ರಜ್ವಲಿಸುವ ಪ್ರಣತೆಯಷ್ಟೇ ಅಲ್ಲ;
ಒಳಗೊಳಗಿನ ಬೆಳಗು
ಹೊರ ಹೊರಗಿನ ಮೆರಗು
ಬದುಕಿನ ಭವ್ಯ ದಿವ್ಯ ಬೆರಗು
ನಾನು ದೀಪಾವಳಿಗೆ
ಅಂಗಡಿಯಿಂದ ದೀಪ ಕೊಳ್ಳುವದಿಲ್ಲ –
ಎಣ್ಣೆ ಬತ್ತಿಯ ಚಿಂತೆಯಿಂದಲ್ಲ;
ಮಗಳೇ ಹೊಂಬೆಳಕು
ಮಡದಿಯೇ ಚೆಂಬೆಳಕು
ಬಂಧು-ಬಳಗ-ಸ್ನೇಹಿತರ ಚಿಜ್ಯೋತಿ ತಳಕು
ನಾನು ದೀಪಾವಳಿಗೆ
ಪಟಾಕಿ ಕೊಳ್ಳುವದಿಲ್ಲ
ಪರಿಸರಪ್ರೇಮಿ ಅನಿಸಿಕೊಳ್ಳುವ ಚಪಲಕ್ಕಲ್ಲ;
ನಮ್ಮ ಮನೆಯೇ ಪಟಾಕಿ ಫ್ಯಾಕ್ಟರಿ
ನಗೆ ಚಟಾಕಿ ಫ್ಯಾಕ್ಟ(fact) ರೀ
ಮಗಳು ಹಾರಿಸುತ್ತಾಳೆ
ಮಡದಿಯೂ ಹಾರಿಸುತ್ತಾಳೆ
ಅವರು ಹಾರಿಸಿದ ಪಟಾಕಿ ಬೆಳಕಿನಲ್ಲಿ
ನಾನು ಬೆಳಗುತ್ತೇನೆ – ಕೈ ಮೈ ಸುಟ್ಟುಕೊಳ್ಳದೆ
ಬೆಳಗಲಿ ಬದುಕು
ಭಯಾಂಧಕಾರವ ತದುಕು
ದುರಾಸೆ ಬೇಡ ಯಾವುದಕು
ನಗುವೇ ಬಾಳ ದಿವ್ಯ ಪದಕು
-ಪಿ ಬಿ ಕೋಟೂರ, ಬೆಂಗಳೂರು
—–