ಅನುದಿನ‌ ಕವನ-೧೦೪೯, ಕವಿ:ಸಿದ್ಧರಾಮ‌ ಕೂಡ್ಲಿಗಿ, ಕವನದ ಶೀರ್ಷಿಕೆ: ಮನಸೆಂದರೇ ಹೀಗೆ

ಮನಸೆಂದರೆ ಹೀಗೇ

ಮನಸೆಂದರೆ ಹೀಗೇ
ಒಮ್ಮೆ ಹೂದೋಟದಲ್ಲಿನ
ಫಳ್ಳನೆ ಅರಳಿ
ನಗುವ ಹೂಗಳಂತೆ
ಮಗದೊಮ್ಮೆ
ಗತಕಾಲದ ಮಸಣದೊಳಗೆ
ಕುಣಿವ ನೆನಪುಗಳ ಭೂತಗಣದಂತೆ
ಮಗದೊಮ್ಮೆ
ಧೋ ಧೋ ಎಂದು
ಸುರಿವ ಮುಂಗಾರಿನ
ಮಳೆಗೆ ಘಮ್ಮನೆ
ಮೂಗರಳಿಸುವ
ನವಿರೇಳಿಸುವ
ಮಣ್ಣಿನ ವಾಸನೆಯ
ತೋಂತನನ ನಾದದಂತೆ !

ಮನಸೆಂದರೆ ಹೀಗೇ
ಒಮ್ಮೆ ಚಿಟ್ಟೆಯಂತೆ
ರೆಕ್ಕೆ ಹರಡಿ
ಬಣ್ಣದ ಚಿತ್ತಾರ
ವೈಯ್ಯಾರ ತೋರುವ
ಉತ್ಸವದಂತಾದರೆ
ಮತ್ತೆ
ನೋಡ ನೋಡುವುದರೊಳಗೆ
ಚಿಪ್ಪಿನೊಳು ಕೈಕಾಲುಗಳ
ತಲೆಯ ಒಳಗೆಳೆದುಕೊಂಡು
ಮುದುರಿ ಕೂಡುವ ಕೂರ್ಮ
ಈಗೀಗ ಕತ್ತಲಲ್ಲಿ
ಕತ್ತಲಾಗಿ ಬಿದ್ದಿರುವ
ಇದಕ್ಕೆ ಎಲ್ಲಾದರೂ ಬೆಳಕಿನ
ಕಿರಣ ಕಂಡರೆ ಸಾಕು
ಮತ್ತೆ ತಲೆಯೆತ್ತಿ ಸರಸರನೆ
ಬಳ್ಳಿಯಂತೆ ಚಿಗುರಿ ಹಬ್ಬಿಬಿಡುವ
ಗಾಢ ಬಯಕೆ !

ಮನಸೆಂದರೆ ಹೀಗೇ
ಸುಟ್ಟು ಬೂದಿಯಾದರೂ
ಮತ್ತೆ ಫೀನಿಕ್ಸ್ ನಂತೆ
ರೆಕ್ಕೆ ಹರಡಿ ಫಡಫಡಿಸಿ
ಮೇಲೆದ್ದು ಹಾರುತ್ತದೆ
ಆಗಸದ ಉದ್ದಗಲಗಳನ್ನು
ಅಳೆಯುತ್ತ ಹೋಗುತ್ತದೆ !


-ಸಿದ್ಧರಾಮ ಕೂಡ್ಲಿಗಿ, ವಿಜಯನಗರ ಜಿಲ್ಲೆ
—–