ನಾ ಓದಿದ ಪುಸ್ತಕ: ಬಾನಂದದ ಕಿನ್ನೂರಿ. ಕೃತಿ ಪರಿಚಯ: ಶಿವಾಜಿ ಗಣೇಶನ್, ಹಿರಿಯ ಪತ್ರಕರ್ತರು, ಬೆಂಗಳೂರು

“ಜಾನಪದ ಗಾನ ಕೋಗಿಲೆ” ಎಂದೇ ಕರೆಸಿಕೊಳ್ಳುವ ತಮಾಷೆ ಮತ್ತು ಹಾಸ್ಯಮಯವಾದ ಗ್ರಾಮೀಣ ಸೊಗಡಿನ ಮಾತುಗಳೊಂದಿಗೆ ಎಲ್ಲರೊಡನೆ ಆತ್ಮೀಯವಾಗಿ ಬೆರೆಯುವ ಸಹಜ ನಡೆಯ ಭಾವಜೀವಿ ಡಾ.ಬಾನಂದೂರು ಕೆಂಪಯ್ಯ. ಅವರನ್ನು ಕುರಿತ ಅವರ ಸ್ನೇಹ ಸಂಗಮದಲ್ಲಿ ಮುಳುಗಿರುವ ಹಲವು ಬರಹಗಾರರು ತಾವು ಕಂಡಂತೆ ಬರೆದಿರುವ ಲೇಖನಗಳ ಗುಚ್ಛ ೩೯೦ ಪುಟಗಳ ಕೃತಿ “ಬಾನಂದದ ಕಿನ್ನೂರಿ”.
ಬಹುತೇಕ ಅವರ ಎಲ್ಲ ಗೆಳೆಯರ ಬರವಣಿಗೆಯಲ್ಲಿ ಬಾನಂದೂರು ಅವರ ಆತ್ಮೀಯತೆಯ ಪ್ರಸಂಗಗಳು ಓದುಗರಿಗೆ ಖುಷಿ ಕೊಡುತ್ತವೆ. ಬಾನಂದೂರು ಅವರ ಜೀವನ ಸಾಧನೆ, ಅವರ ಹಾಡುಗಾರಿಕೆ ಮತ್ತು ಆಕಾಶವಾಣಿ ಮತ್ತು ದೂರದರ್ಶನಗಳಲ್ಲಿ ಮಾಡಿದ ಕೆಲಸ, ಸಾರ್ವಜನಿಕ ಸಭೆಗಳಲ್ಲಿನ ಗಾಯನ, ಜಾನಪದ ಗೀತೆಗಳ ಸಂಗ್ರಹಕ್ಕೆ ಅವರು ಗ್ರಾಮೀಣ ಜನರೊಡನೆ ಬೆರೆತು ಹೋಗಿ ಮಾಡಿದ ಸಂಶೋಧನೆ ಎಲ್ಲವೂ ಮುಕ್ತವಾಗಿ ಈ ಕೃತಿಯಲ್ಲಿ ಅನಾವರಣಗೊಂಡಿದೆ.
ಸಾಮಾನ್ಯವಾಗಿ ಹಲವರ ಬದುಕನ್ನು ಕುರಿತ ಲೇಖನಗಳು ಬೋರ್ ಹೊಡೆಸುತ್ತವೆ. ಆದರೆ ಇದು ವಿಭಿನ್ನ. ಅನೇಕರ ಬರಹಗಳು ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸಿ ಖುಷಿ ಕೊಡುತ್ತವೆ. ಇವರೇನು ಬರೆದಿದ್ದಾರೆ, ಅವರೇನು ಬರೆದಿದ್ದಾರೆ ಎಂದು ಓದುವ ಕುತೂಹಲವನ್ನು ಉಂಟು ಮಾಡುವ ಅಪರೂಪದ ಕೃತಿ ಇದು.
ನನ್ನ ಸಹದ್ಯೋಗಿಯಾಗಿದ್ದ ಹಿರಿಯ ಪತ್ರಕರ್ತ, ಲೇಖಕ ಲಕ್ಷ್ಮಣ ಕೊಡಸೆ ಸಂಪಾದಕತ್ವದಲ್ಲಿ ಡಿ.ಎಸ್. ವೀರಯ್ಯ ಅವರ ಪಿತಾಮಹ ಪ್ರಕಾಶನ ಈ ಕೃತಿಯನ್ನು ಹೊರತಂದು ಬಾನಂದೂರು ಅವರ ಮುಗ್ಧತೆ, ವ್ಯಕ್ತಿತ್ವ ಮತ್ತು ಜೀವನದ ಸಾಧನೆಯನ್ನು ಅನಾವರಣಗೊಳಿಸಿದ್ದಾರೆ. ನಿಜಕ್ಕೂ ಇದೊಂದು ಉತ್ತಮ ಕೃತಿ.


-ಶಿವಾಜಿ ಗಣೇಶನ್, ಹಿರಿಯ ಪತ್ರಕರ್ತರು, ಬೆಂಗಳೂರು
—–