ಬಳ್ಳಾರಿ: ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ  ಹೋರಾಟಕ್ಕೆ ಎಐಡಿಎಸ್ಓ ಬೆಂಬಲ

ಬಳ್ಳಾರಿ, ನ.24: ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ತರಗತಿಗಳನ್ನು ಬಹಿಷ್ಕರಿಸಿ ಮುಷ್ಕರ ಹಾದಿ ಹಿಡಿದಿರುವ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ  ಹೋರಾಟಕ್ಕೆ ಎಐಡಿಎಸ್ಓ ಜಿಲ್ಲಾ ಸಮಿತಿ ಬೆಂಬಲ ಘೋಷಿಸಿದೆ.


ಈ ಕುರಿತು ಎಐಡಿಎಸ್ಓನ ಜಿಲ್ಲಾ ಕಾರ್ಯದರ್ಶಿ ಕಂಬಳಿ ಮಂಜುನಾಥ ಪತ್ರಿಕಾ ಹೇಳಿಕೆಯನ್ನು ನೀಡಿದ್ದು,
ಪ್ರತಿಭಟನಾನಿರತ ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದ್ದಾರೆ.
ಸುಮಾರು 10 -15 ವರ್ಷಗಳಿಂದ ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸೇವಾ ನಿರತರಾಗಿರುವ ಅತಿಥಿ ಉಪನ್ಯಾಸಕರು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಸರ್ಕಾರವು ತಮ್ಮ ಸೇವಾ ಭದ್ರತೆ ಖಾತ್ರಿಪಡಿಸುವಂತೆ ಹಾಗೂ ನಿಯಮಿತ ವೇತನಕ್ಕೆ ಆಗ್ರಹಿಸಿ ಅವರು ಪ್ರತಿಭಟಿಸುತ್ತಿರುವುದು ನ್ಯಾಯಸಮ್ಮತವಾಗಿದೆ ಎಂದು ಮಂಜುನಾಥ್ ತಿಳಿಸಿದ್ದಾರೆ.

ಕಂಬಳಿ ಮಂಜುನಾಥ

ನ್ಯಾಯಸಮ್ಮತವಾಗಿರುವ ಅವರ ಬೇಡಿಕೆಗಳನ್ನು ಈಡೇರಿಸಿ ಅತಿಥಿ ಉಪನ್ಯಾಸಕರಿಗೆ ಗೌರವಯುತ ಜೀವನವನ್ನು ಸಾಧ್ಯವಾಗಿಸುವುದು ಸರ್ಕಾರದ ಕರ್ತವ್ಯವಾಗಿದೆ.  ರಾಜ್ಯ ಸರ್ಕಾರವು ಈ ವಿಷಯದಲ್ಲಿ ಯಾವುದೇ ರೀತಿ ವಿಳಂಬ ಮಾಡದೆ ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು ಮತ್ತು ಈ ಮೂಲಕ ತರಗತಿಗಳು ನಡೆಯಲು ಅನುವು ಮಾಡಿಕೊಟ್ಟು ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲ ಮಾಡಬೇಕೆಂದು ಎಐಡಿಎಸ್ಓ ಈ ಮೂಲಕ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
——