ಬಳ್ಳಾರಿ, ನ.27: ಸ್ವಾತಂತ್ರ್ಯಪೂರ್ವ ಹಾಗೂ ಏಕೀಕರಣ ಪೂರ್ವದಲ್ಲಿ ದೇಶದಲ್ಲೇ ದೊಡ್ಡ ಜಿಲ್ಲೆಯಾಗಿದ್ದ ಬಳ್ಳಾರಿ ಮತ್ತು ಕನ್ನಡದ ಅಭಿವೃದ್ಧಿಗೆ ಅಂದಿನ ಡಿಸ್ಟ್ರಿಕ್ಟ್ ಕಲೆಕ್ಟರ್ ಥಾಮಸ್ ಮನ್ರೋ ಮತ್ತು ಕ್ರೈಸ್ತ ಪಾದ್ರಿ ರೆ. ಜಾನ್ ಹ್ಯಾಂಡ್ಸ್ ಅವರ ಕೊಡುಗೆ ಅನನ್ಯ ಎಂದು ಸಂಶೋಧಕ, ಪ್ರಾಧ್ಯಾಪಕ ಡಾ. ಮೃತ್ಯುಂಜಯ ರುಮಾಲೆ ಅವರು ಕೊಂಡಾಡಿದರು.
ನಗರದ ರಾಘವ ಕಲಾಮಂದಿರದಲ್ಲಿ ಶನಿವಾರ ಸಂಜೆ ಪುನರುತ್ಥಾನ ಅಧ್ಯಯನ ಕೇಂದ್ರ ಆಯೋಜಿಸಿದ್ದ ಹಿರಿಯ ಸಾಹಿತಿ ಟಿ.ಕೆ. ಗಂಗಾಧರ ಪತ್ತಾರ ಅವರ , ”ಬಿಸಿಲುಸಿರು ಸುರಭಿಸಿದ ಪ್ರತಿಭಾಗ್ನಿ ಕುಸುಮಗಳು’ ಕೃತಿ ಲೋಕಾರ್ಪಣೆ ಸಮಾರಂಭದಲ್ಲಿ
ಪಾಲ್ಗೊಂಡ ಅವರು ಕೃತಿ ಪರಿಚಯಿಸಿದರು.
ಸ್ವಾತಂತ್ರ್ಯಪೂರ್ವ ಹಾಗೂ ಏಕೀಕರಣ ಪೂರ್ವದಲ್ಲಿಯೂ ಅಪ್ಪಟ ಕನ್ನಡ ಭೂಮಿಯಾಗಿದ್ದ ಬಳ್ಳಾರಿ ರಾಜಕೀಯ ಮತ್ತು ಆಡಳಿತಗಳ ಇಚ್ಛಾಶಕ್ತಿಗಳ ಕೊರತೆಯಿಂದ ತ್ರಿಭಾಷಾ ಹೇರಿಕೆ ಸೇರಿದಂತೆ ಹಲವು ಸಂಕಷ್ಟಗಳಿಗೆ ಗುರಿಯಾಗಿತ್ತು ಎಂದು ವಿಷಾಧಿಸಿದರು.
ಬಳ್ಳಾರಿ ಕರ್ನಾಟಕದಲ್ಲಿ ಉಳಿಯಲು ಸಾವಿರಾರು ಜನರ ಹೋರಾಟ, ತ್ಯಾಗದ ಜತೆ ಥಾಮಸ್ ಮನ್ರೋ ಮತ್ತು ಜಾನ್ ಹ್ಯಾಂಡ್ಸ್ ಅವರ ಪ್ರಜ್ಞಾಪೂರ್ವಕ ಬದುಕು ಕೂಡಾ ಕಾರಣ ಎಂದು ಹಲವು ಉದಾಹರಣೆಗಳ ಸಮೇತ ಡಾ. ರುಮಾಲೆ ವಿವರಿಸಿದರು.
ಈ ಮಹಾಪುರುಷರ ಭಾವಚಿತ್ರವನ್ನು ಅವಿಭಜಿತ ಬಳ್ಳಾರಿ ಜಿಲ್ಲೆಯ ಪ್ರತಿಯೊಬ್ಬರೂ ತಮ್ಮಮನೆಯಲ್ಲಿ ಹಾಕಿಕೊಂಡು ಸ್ಮರಿಸಬೇಕು ಎಂದು ಹೇಳಿದರು.
ಸದಭಿರುಚಿಯ ವ್ಯಕ್ತಿತ್ವದ ಗಂಗಾಧರ ಪತ್ತಾರ್ ಅವರ ಈ ಬೃಹತ್ ಸಂಪುಟದ ಹಿಂದೆ ಸಾಂಸ್ಕೃತಿಕ ಹೊಣೆಗಾರಿಕೆ ಜತೆ ಚಾರಿತ್ರಿಕ ಕಾಳಜಿ, ನಾಡು ನುಡಿಗಳ ಮೇಲಿನ ಅಗಾಧ ಪ್ರೀತಿ ಇದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಆಶಯ ನುಡಿಗಳನ್ನಾಡಿದ ಪ್ರಜ್ಞಾ ಪ್ರವಾಹ ಸಂಸ್ಥೆಯ ಅಖಿಲ ಭಾರತ ಸಹ ಸಂಯೋಜಕ ರಘುನಂದನ ಅವರು, ಈಸ್ಟ್ ಇಂಡಿಯಾ ಕಂಪನಿಯ ಅಧಿಕಾರಿಗಳು, ಕ್ರೈಸ್ತ ಪಾದ್ರಿಗಳು ಕನ್ನಡ ಕಟ್ಟಿ ಬೆಳೆಸಿದ್ದರೆ ಅವರ ಕಾರ್ಯವನ್ನು ಸ್ಮರಿಸೋಣ ಆದರೆ ಅವರ ಫೋಟೊಗಳನ್ನು ನಮ್ಮ ಮನೆಯಲ್ಲಿ ಹಾಕಿಕೊಳ್ಳುವುದು ಬೇಡ ಎಂದು ಅಕ್ಷೇಪಿಸಿದರು.
ಅವರ ಮೂಲ ಉದ್ದೇಶ ದೇಶದ ಸಂಪತ್ತನ್ನು ದೋಚುವುದು ಮತ್ತು ಕ್ರಿಶ್ಚಿಯನ್ ಸಾಮ್ರಾಜ್ಯವನ್ನು ಹಬ್ಬಿಸುವುದಾಗಿತ್ತು ಎಂದರು.
ಅಧ್ಯಕ್ಷತೆ ವಹಿಸಿದ್ದ ವಾರ್ಡ್ಲ್ ಕಾಲೇಜಿನ ನಿವೃತ್ತ ಪ್ರಾಚಾರ್ಯ ಕೆ ಎಚ್ ಹರಿಕುಮಾರ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಹುಬ್ಬಳ್ಳಿಯ ವಿಶ್ವಮಯ ಸಾಹಿತ್ಯ ಪ್ರಚಾರ ಸಮಿತಿ ಮುಖ್ಯಸ್ಥ ಭೀಮಸೇನ ಬಡಿಗೇರ, ಡಾ. ವಿದ್ಯಾಧರ ಕಿನ್ನಾಳ್, ಕೃತಿಕಾರ ಗಂಗಾಧರ ಪತ್ತಾರ, ಪುನರುತ್ಥಾನ ಅಧ್ಯಯನ ಕೇಂದ್ರದ ಮುಖ್ಯಸ್ಥ ಶ್ರೀನಾಥ ಜೋಷಿ, ಕೆಜಿಪಿ ನಿಕಟ ಪೂರ್ವ ಅಧ್ಯಕ್ಷ ಟಿ ಎಚ್ ಎಂ ಬಸವರಾಜ ಮಾತನಾಡಿದರು.
ಇದೇ ಸಂದರ್ಭದಲ್ಲಿ ಹತ್ತು ಕೃತಿಗಳನ್ನು ಖರೀದಿಸಿ ಪ್ರಕಾಶಕರನ್ನು ಪ್ರೋತ್ಸಾಹಿಸಿದ ಟಿ ಎಚ್ ಎಂ ಬಸವರಾಜ್ ಸೇರಿದಂತೆ ಹಲವು ಸಾಹಿತ್ಯ ಪ್ರಿಯರು, ಕೃತಿಯ ಮುಖಪುಟ ರಚಿಸಿದ ರಮೇಶ್ ಉಡೇಗೋಳ, ಕೃತಿಯ ಲೇಖನಗಳಿಗೆ ಪೂರಕ ಚಿತ್ರ ಬಿಡಿಸಿದ ಮಹಮ್ಮದ್ ರಫಿ, ಶ್ರೀಧರ ಜೋಷಿ ಕೇಂದ್ರದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಪತ್ತಾರ ಅವರ ಪುತ್ರ ನಾಗಚಂದ್ರ ಅವರು ರಚಿಸಿದ ಕವಿತೆಯನ್ನು ಮೊಮ್ಮಗಳು ಕವನ ಶ್ರೀ ವಾಚಿಸಿ ಗಮನ ಸೆಳೆದಳು.
ಕೃತಿಕಾರ ಟಿಕೆ ಗಂಗಾಧರ ಪತ್ತಾರ ಅವರನ್ನು ಉಪನ್ಯಾಸಕ ಎಎಂಪಿ ವೀರೇಶಸ್ವಾಮಿ ಅವರು ಪರಿಚಯಿಸಿ, ಕವನ ವಾಚಿಸಿದರು. ಅತಿಥಿ ಗಣ್ಯರನ್ನು ನ್ಯಾಯವಾದಿ ಶ್ರೀನಿವಾಸ ಡಣಾಪುರ ಪರಿಚಯಿಸಿ ಸ್ವಾಗತಿಸಿದರು. ಇಂ. ಸಂಜೀವ ಪ್ರಸಾದ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವಸುಧಾ ಧಾರವಾಡಕರ್ ನಿರೂಪಿಸಿದರು. ಸಂಗೀತ ಶಿಕ್ಷಕಿ ರೇಣುಕಾ ಅಭಿಲಾಷ ಪ್ರಾರ್ಥಿಸಿದರು