ಬಳ್ಳಾರಿ ,ನ 26: ಬೌದ್ಧ ತಾತ್ವಿಕತೆ ಎನ್ನುವುದು ಅದೊಂದು ಜೀವನ ಮಾರ್ಗ ಎಂದು ಹಿರಿಯ ಚಿಂತಕ ಡಾ.ನಟರಾಜ್ ಬೂದಾಳು ಅವರು ತಿಳಿಸಿದರು.
ನಗರದ ಎಸ್.ಎಸ್.ಎ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಕನ್ನಡ ವಿಭಾಗ ಆಯೋಜಿಸಿದ್ದ ‘ ‘ಬೌದ್ಧ ತಾತ್ವಿಕತೆಯ ಪ್ರಸ್ತುತತೆ’ ವಿಷಯದ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.
ಬೌದ್ಧ ತಾತ್ವಿಕತೆ ಬಿಡಿ ಬಿಡಿಯಾದ ಪರಿಕಲ್ಪನೆಗಳ ಒಂದು ಸಂಗ್ರಹವಲ್ಲ .ಅದೊಂದು ಪೂರ್ಣ ಪ್ರಮಾಣದ ಯಾನ ಎಂದು ಹೇಳಿದರು.
ಯಾರನ್ನೂ ತಪ್ಪಿಸ್ಥರನ್ನಾಗಿಸುವ ಉದ್ದೇಶ ಬುದ್ಧ ಮಾರ್ಗಕ್ಕಿಲ್ಲ. ಅದು ಯಾವುದರ ವಿರುದ್ಧವೂ ಅಲ್ಲ .ಯಾರ ವಿರುದ್ಧವೂ ಅಲ್ಲ . ಸರಿಯಾದ ದಾರಿಯನ್ನು ಕಂಡುಕೊಳ್ಳುವುದು ಮಾತ್ರ ಅದರ ಉದ್ದೇಶ ಎಂದು ಅಭಿಪ್ರಾಯ ಪಟ್ಟರು.
ವಿಜ್ಞಾನದ ಹಾಗೆ ಬೌದ್ಧ ತಾತ್ವಿಕತೆಯು ಯಾವ ಸ್ವಾರ್ಥದ ಉದ್ದೇಶಗಳೂ ಇಲ್ಲದೆ ತಾತ್ವಿಕತೆಯ ಶೋಧದಲ್ಲಿ ತೊಡಗಿದೆ .ಅದೊಂದು ಜೀವನ ಸಂವಿಧಾನ ಎಂದರು.
ಯಾವುದನ್ನಾದರೂ ವರ್ತಮಾನದ ಅರಿವಿನ ಬೆಳಕಿನಲ್ಲಿ ಪರಿಶೀಲಿಸಿ ಒಪ್ಪಬೇಕೆನ್ನುವುದು ಬೌದ್ಧ ತಾತ್ವಿಕತೆಯ ನಿಲುವು. ಇದು ಹೋಗ ಹೋಗುತ್ತಲೇ ಕೇಳಿಕೊಂಡು ಹೋಗಬೇಕಾದ ದಾರಿ. ಪ್ರತಿ ಹೆಜ್ಜೆಯು ಮುಖ್ಯವೇ . ಯಾವುದನ್ನುಅನ್ಯ ನಿಯಂತ್ರಣಕ್ಕೆ ಬಿಡದೆ ನಡೆಯುವ ಅರಿವಿನ ಯಾನ ಎಂದು ಮಾರ್ಮಿಕವಾಗಿ ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಎಚ್ ಕೆ ಮಂಜುನಾಥ್ ರೆಡ್ಡಿ ಅವರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕಲಾವಿದ ಕೆ.ಎನ್ . ಮನು ಚಕ್ರವರ್ತಿ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಹೊನ್ನೂರಾಲಿ, ಕನ್ನಡ ವಿಭಾಗದ ಮುಖ್ಯಸ್ಥ ಡಾ. ದಸ್ತಗೀರಸಾಬ್ ದಿನ್ನಿ ವೇದಿಕೆಯಲ್ಲಿದ್ದರು.
ಕನ್ನಡ ವಿಭಾಗದ ರಾಮಸ್ವಾಮಿ ಅವರು ಸ್ವಾಗತಿಸಿ, ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಸಾಹಿತಿಗಳಾದ ವೀರೇಂದ್ರ ರಾವಿಹಾಳ್ ,ಅಜಯ ಬಣಕಾರ್, ಎನ್ .ಡಿ.ವೆಂಕಮ್ಮ , ಡಾ. ಶಿವಲಿಂಗಪ್ಪ ಹಂದ್ಯಾಳ್, ಸಹಾಯಕ ಪ್ರಾಧ್ಯಾಪಕರಾದ ಡಾ.ಹುಚ್ಚುಸಾಬ್, ಲಿಂಗಪ್ಪ , ದೊಡ್ಡಬಸಪ್ಪ ಮತ್ತಿತರರು ಇದ್ದರು.
—–