ಕುವೆಂಪು ವಿಶ್ವವಿದ್ಯಾಲಯ(ಶಂಕರ ಘಟ್ಟ), ನ.೨೬: ಜಾತಿ ಧರ್ಮಗಳನ್ನು ಮೀರಿ ನಾವೆಲ್ಲ ಭಾರತೀಯರು ಎಂಬ ಮನೋಭಾವ ಮೂಡುವಲ್ಲಿ ಸಂವಿಧಾನದ ಪಾತ್ರ ಹಿರಿದಾಗಿದ್ದು, ನಮ್ಮೆಲ್ಲರ ಹೃದಯ ಧರ್ಮ ಭಾರತ ಸಂವಿಧಾನ ಎಂದು ನ್ಯಾಯವಾದಿ ಸುಧೀರ್ ಕುಮಾರ್ ಮರೊಳ್ಳಿ ಅವರು ಹೇಳಿದರು. ಅವರು ಕುವೆಂಪು ವಿಶ್ವವಿದ್ಯಾಲಯದ ಡಾ. ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರ ಭಾನುವಾರ ಪ್ರೊ.ಎಸ್.ಪಿ. ಹಿರೇಮಠ ಸಭಾಂಗಣದಲ್ಲಿ ಏರ್ಪಡಿಸಿದ್ದ ” ಸಂವಿಧಾನ ಸಮರ್ಪಣ ದಿನ” ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು. ದೇಶದ ಪ್ರತಿಯೊಬ್ಬ ಪ್ರಜೆಯು ಸ್ವತಂತ್ರವಾಗಿ, ಸಮಾನತೆಯಿಂದ ಬದುಕಲು ಅವಕಾಶ ನೀಡಿದ್ದು ಸಂವಿಧಾನ ಎಂದು ತಿಳಿಸಿದರು. ದೇಶ ಸ್ವಾತಂತ್ರ್ಯವನ್ನು ಪಡೆದ ನಂತರ ಸ್ವಾತಂತ್ರ್ಯದ ಆಶಯವನ್ನು ಈಡೇರಿಸುವ ಜವಾಬ್ದಾರಿ ಎಲ್ಲರ ಮೇಲಿತ್ತು. ಆ ಹೊತ್ತಿನಲ್ಲಿ ಉತ್ತಮ ಸಂವಿಧಾನವನ್ನು ರಚಿಸುವ ಮೂಲಕ ಡಾ. ಅಂಬೇಡ್ಕರ್ ಅವರು ನಿಜವಾದ ಸ್ವಾತಂತ್ರ್ಯ ಎಂದರೆ ಏನೆಂದು ಜನರಿಗೆ ಅರ್ಥ ಮಾಡಿಸಿದರು ಎಂದರು. ಪ್ರಸ್ತುತ ಅಧಿಕಾರ, ಆಹಾರದ ಹಕ್ಕು, ನಮ್ಮಿಷ್ಟದಂತೆ ಬದುಕುವ ಹಕ್ಕು ಎಲ್ಲವನ್ನು ಸಂವಿಧಾನ ನೀಡಿದೆ ಹೀಗಾಗಿ ಸಂವಿಧಾನವನ್ನು ಗೌರವಿಸುವ ಕಾರ್ಯ ಎಲ್ಲರಿಂದ ಆಗಬೇಕು ಎಂದು ಅಭಿಪ್ರಾಯ ಪಟ್ಟರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕುವೆಂಪು ವಿಶ್ವವಿದ್ಯಾಲಯ ಹಣಕಾಸು ಅಧಿಕಾರಿ ಬಂಗಾರಪ್ಪ ಜಿ. ಅವರು, ಅನೇಕ ಸವಾಲುಗಳ ನಡುವೆಯೂ ಪ್ರಜಾಪ್ರಭುತ್ವ ಯಶಸ್ವಿಯಾಗಿದೆ ಎಂದಾದರೆ ಅದಕ್ಕೆ ಸಂವಿಧಾನವೇ ಕಾರಣ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುವೆಂಪು ವಿಶ್ವವಿದ್ಯಾಲಯ ಮೌಲ್ಯಮಾಪನ ಕುಲಸಚಿವ ಡಾ. ಗೋಪಿನಾಥ್ ಎಸ್.ಎಂ, ಸಂವಿಧಾನದ ಆಶಯವೆ ಸಮಾನತೆ, ಯಾರೂ ಕೂಡ ಯಾವುದೇ ಕಾರಣದಿಂದ ತಮಗೆ ಸಿಗಬೇಕಾದ ಸಾಮಾಜಿಕ ಸೌಲಭ್ಯಗಳಿಂದ ವಂಚಿತರಾಗಬಾರದು. ಸಂವಿಧಾನ ನೀಡಿರುವ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಅವರು ತಿಳಿಸಿದರು. ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್ ಪ್ರಾಸ್ತಾವಿಕ ಮಾತುಗಳ ಜೊತೆ ಸಂವಿಧಾನದ ಪ್ರಸ್ತಾವನೆಯನ್ನು ಭೋದಿಸಿದರು. ಆಶುಕವಿ ಯುಗಧರ್ಮ ರಾಮಣ್ಣ ಪ್ರಾರ್ಥಿಸಿದರು.ಡಾ. ಪುರುಷೋತ್ತಮ್ ಎಸ್.ವಿ. ಸ್ವಾಗತಿಸಿದರು. ಡಾ.ರವಿ ನಾಯಕ್ ವಂದಿಸಿದರು. ಡಾ. ನವೀನ್ ಮಂಡಗದ್ದೆ ನಿರೂಪಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ಮೈಸೂರಿನ ಗಾನ ಸಿಂಚನ ಕಲಾವಿದರು ಅಂಬೇಡ್ಕರ್ ಮತ್ತು ಸಂವಿಧಾನ ಕುರಿತ ಗೀತೆಗಳನ್ನು ಹಾಡಿದರು.