ಸರಕಾರಿ ಪದವಿ ಕಾಲೇಜು ಅತಿಥಿ ಉಪನ್ಯಾಸಕರ ಅನಿರ್ಧಿಷ್ಟ ಮುಷ್ಕರ ಬಳ್ಳಾರಿಯಲ್ಲಿ ಏಳನೇ ದಿನದತ್ತ!

ಬಳ್ಳಾರಿ, ನ.28: ತಮ್ಮ ಸೇವೆಯ ಖಾಯಮಾತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ಕೈಗೊಂಡಿರುಪ ಅನಿರ್ಧಿಷ್ಟಾವಧಿ ಧರಣಿ ಆರನೇ ದಿನವಾದ ಮಂಗಳವಾರವೂ ಮುಂದುವರೆಯಿತು.

ನಗರದ ಎಸ್ ಎಸ್ ಎ ಸರಕಾರಿ ಪ್ರಥಮ‌ದರ್ಜೆ ಕಾಲೇಜಿನ ಮುಂದುಗಡೆ ರಾಜ್ಯ ಸರಕಾರಿ ಅತಿಥಿ ಉಪನ್ಯಾಸಕ ಸಂಘದ ರಾಜ್ಯ ಗೌರವಾಧ್ಯಕ್ಷರಾಗಿರುವ ಡಾ. ಟಿ. ದುರುಗಪ್ಪ ಅವರ ನೇತೃತ್ವದಲ್ಲಿ ಜರುಗಿದ ಅನಿರ್ಧಿಷ್ಟ ‌ಮುಷ್ಕರದಲ್ಲಿ ಸರಳಾದೇವಿ‌ಕಾಲೇಜು ಸೇರಿದಂತೆ ಜಿಲ್ಲೆಯ ನೂರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಪಾಲ್ಗೊಂಡು ತಮ್ಮ ಬೇಡಿಕೆಗಳು ನ್ಯಾಯಯುತವಾಗಿದ್ದು ಈಡೇರಿಸ ಬೇಕೆಂದು ಆಗ್ರಹಿಸಿದರು.
ಡಾ. ದುರುಗಪ್ಪ ಅವರು ಮಾತನಾಡಿ, ನೆರೆ ರಾಜ್ಯದ ಆಂಧ್ರಪ್ರದೇಶದ, ತೆಲಂಗಾಣ, ತಮಿಳುನಾಡು, ದೆಹಲಿ, ಪಶ್ಚಿಮ ಬಂಗಾಳ ಮುಂತಾದ ರಾಜ್ಯಗಳಲ್ಲಿ ಅತಿಥಿ ಉಪನ್ಯಾಸಕರಿಗೆ ಅಲ್ಲಿನ ಸರ್ಕಾರಗಳು ಸೇವಾ ಭದ್ರತೆಯನ್ನು ನೀಡಿ ಖಾಯಂ ಮಾಡಿರುವಂತೆ ಕರ್ನಾಟಕದಲ್ಲೂ ಕ್ರಮ‌ಜರುಗಿಸಬೇಕು ಎಂದು ಒತ್ತಾಯಿಸಿದರು.
ಪ್ರತಿ ಪಕ್ಷದ ನಾಯಕರಾಗಿದ್ದಾಗ ಅತಿಥಿ ಉಪನ್ಯಾಸಕರ‌ ಬೇಡಿಕೆಗಳನ್ನು ಈಡೇರಿಸಲು ಅಂದಿನ ಬಿಜೆಪಿ ಸರಕಾರವನ್ನು ಒತ್ತಾಯಿಸಿದ್ದ ಸಿದ್ದರಾಮಯ್ಯ ‌ಅವರು ಪ್ರಸ್ತುತ ಮುಖ್ಯಮಂತ್ರಿಗಳಾಗಿದ್ದಾರೆ. ಹೀಗಾಗಿ ತಮ್ಮನ್ನು ಖಾಯಂಗೊಳಿಸಿ ಎರಡು ದಶಕಗಳ ಹೋರಾಟಕ್ಕೆ ತಾರ್ಕಿಕ ಅಂತ್ಯ ಹಾಡಬೇಕು ಎಂದು ಆಗ್ರಹಿಸಿದರು.
ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಅತಿಥಿ ಉಪನ್ಯಾಸಕರ ಬೇಡಿಕೆ ಕುರಿತು ಸೂಕ್ತ ಯೋಜನೆ ರೂಪಿಸುವುದಾಗಿ ಹೇಳಿರುವಂತೆ ತನ್ನ ಮಾತನ್ನು ಉಳಿಸಿಕೊಳ್ಳಬೇಕು ಎಂದು ಮುಷ್ಕರದಲ್ಲಿ ಭಾಗವಹಿಸಿರುವ ಅತಿಥಿ ಉಪನ್ಯಾಸಕರು ಒತ್ತಾಯಿಸಿದರು.
ಅನಿರ್ಧಿಷ್ಟ ಮುಷ್ಕರದಲ್ಲಿ ಸಂಘದ ಉಪಾಧ್ಯಕ್ಷ ಡಾ.ಹೆಚ್.ಹನುಮೇಶ್, ಜಿಲ್ಲಾ ಮುಖಂಡರಾದ
ಡಾ.ಕೆ. ಬಸಪ್ಪ, ರುದ್ರಮುನಿ, ಡಿ.ಸಿದ್ದೇಶ್, ಎಸ್.ಎಂ,ಗೋವಿಂದಪ್ಪ, ಗುರುರಾಜ್,ಪ್ರಭಾವತಿ, ಶುಭಾಜೋತಿ, ಸುಜಾತ, ನವೀನಕುಮಾರಿ,ಸರಿತಾ ಮತ್ತಿತರರು ಭಾಗವಹಿಸಿದ್ದರು.
*****