ಬಳ್ಳಾರಿ, ನ.೩೦: ತಮ್ಮ ಸೇವೆಯನ್ನು ಖಾಯಂ ಗೊಳಿಸಲು ಒತ್ತಾಯಿಸಿ ಕಳೆದ ಏಳು ದಿನಗಳಿಂದ ಅನಿರ್ಧಿಷ್ಟಾವಧಿ ಮುಷ್ಕರ ನಡೆಸುತ್ತಿರುವ ಸರಕಾರಿ ಪದವಿ ಕಾಲೇಜು ಅತಿಥಿ ಉಪನ್ಯಾಸಕರಿಗೆ ಶೀಘ್ರ ಶುಭ ಸಂದೇಶ ತಲುಪಲಿದೆ!?
ಹೌದು! ಈ ವಿಷಯವನ್ನು ಯುವ ಸಬಲೀಕರಣ, ಕ್ರೀಡೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರೇ ಮುಷ್ಕರನಿರತ ಅತಿಥಿ ಉಪನ್ಯಾಸಕರಿಗೆ
ತಿಳಿಸಿದರು.
ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರ ಸಂಘದ ನೇತೃತ್ವದಲ್ಲಿ ನಗರದ ಎಸ್ ಎಸ್ ಎ ಸರಕಾರಿ ಪ್ರಥಮದರ್ಜೆ ಕಾಲೇಜು ಮುಂದುಗಡೆ ನಡೆಯುತ್ತಿರುವ ಸತ್ಯಾಗ್ರಹ ಸ್ಥಳಕ್ಕೆ ಬುಧವಾರ ಭೇಟಿನೀಡಿ ಜಿಲ್ಲಾ ಘಟಕದ ಮುಖಂಡರಿಂದ ಮನವಿ ಪತ್ರವನ್ನು ಸ್ವೀಕರಿಸಿ ಅವರು ಮಾತನಾಡಿದರು.
ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಬೇಡಿಕೆಯನ್ನು ಈಡೇರಿಸುವ ಬಗ್ಗೆ ಭರವಸೆ ನೀಡಲಾಗಿದೆ. ಮುಖ್ಯಮಂತ್ರಿಗಳು ತಮ್ಮ ಜತೆ ಇದ್ದಾರೆ. ತಾವು ಕೂಡಾ ಸಿಎಂ ಅವರ ಜತೆ ಚರ್ಚಿಸುತ್ತೇನೆ. ಶೀಘ್ರ ಶುಭ ಸಂದೇಶ ತಲುಪಲಿದೆ ಎಂದರು.
ತಮ್ಮ ಸರಕಾರ 2013-18ರಲ್ಲಿ ಪ್ರಣಾಳಿಕೆಯಲ್ಲಿ ನೀಡಿದ್ದ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದನ್ನು ಸ್ಮರಿಸಿದ ಈ ಬಾರಿಯ ಎಲ್ಲಾ ಭರವಸೆಗಳನ್ನು ಈಡೇರಿಸಲಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ರಾಜ್ಯ ಗೌರವಾಧ್ಯಕ್ಷ ಡಾ. ಟಿ. ದುರುಗಪ್ಪ ಮಾತನಾಡಿ ಸಂಘದ ನ್ಯಾಯಯುತ ಬೇಡಿಕೆಗಳ ಬಗ್ಗೆ ಸಚಿವರಿಗೆ ಮನವರಿಕೆ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳಾದ ಡಾ. ಹನುಮೇಶ್, ಡಾ.ಕೆ. ಬಸಪ್ಪ, ರುದ್ರಮುನಿ, ಡಿ.ಸಿದ್ದೇಶ್, ಎಸ್.ಎಂ ರಮೇಶ್, ಗೋವಿಂದಪ್ಪ, ಗುರುರಾಜ್,ಪ್ರಭಾವತಿ, ಶುಭಾಜೋತಿ, ಸುಜಾತ, ನವೀನಕುಮಾರಿ, ಕಾಂಗ್ರೆಸ್ ಮುಖಂಡ ಎ.ಮಾನಯ್ಯ ಮತ್ತಿತರರು ಉಪಸ್ಥಿತರಿದ್ದರು.
*****