ಬಳ್ಳಾರಿ, ಡಿ.1: ನಗರದ ಸುಜಾತಮ್ಮ ಬಯಲಾಟ ಕಲಾ ಟ್ರಸ್ಟ್ ಇಂದು(ಶುಕ್ರವಾರ) ಸಂಜೆ ಇಲ್ಲಿನ ಸಾಂಸ್ಕೃತಿಕ ಸಮುಚ್ಚಯದ ನಾಡೋಜ ಡಾ. ಸುಭದ್ರಮ್ಮ ಮನ್ಸೂರು ಬಯಲು ರಂಗಮಂದಿರದಲ್ಲಿ ‘ಕಾರ್ತೀಕ ಸಾಂಸ್ಕೃತಿಕ ಉತ್ಸವ’ ವನ್ನು ಆಯೋಜಿಸಿದೆ.
ಸಂಜೆ ಆರು ಗಂಟೆಗೆ ಯುವ ಸಬಲೀಕರಣ, ಕ್ರೀಡೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ಉತ್ಸವಕ್ಕೆ ಚಾಲನೆ ನೀಡುವರು.
ನಗರ ಶಾಸಕ ನಾರಾ ಭರತರೆಡ್ಡಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ವಿಶೇಷ ಆಹ್ವಾನಿತರಾಗಿ ಕಾಂಗ್ರೆಸ್ ಮುಖಂಡ ಬಿ. ವೆಂಕಟೇಶ್ ಪ್ರಸಾದ್, ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಹೊನ್ನೂರಪ್ಪ, ಹಾನಗಲ್ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಮುಂಡರಗಿ ನಾಗರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಉಪನಿರ್ದೇಶಕ ಚೋರನೂರು ಕೊಟ್ರಪ್ಪ, ಬಿಡಿ ಹಳ್ಳಿ ಕಾಂಗ್ರೆಸ್ ಮುಖಂಡ ಬಿ. ಸತ್ಯನಾರಾಯಣ ರೆಡ್ಡಿ, ಶ್ರೀ ವಾಲ್ಮೀಕಿ ಮಹರ್ಷಿ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಬಯಲಾಟ ಕಲಾವಿದೆ ಸುಜಾತಮ್ಮ,ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರೂ ಆಗಿರುವ ಕರ್ನಾಟಕ ಕಹಳೆ ಡಾಟ್ ಕಾಮ್ ನ ಸಂಪಾದಕ ಸಿ.ಮಂಜುನಾಥ್, ಹಿರಿಯ ಪತ್ರಕರ್ತರಾದ ಶಶಿಧರ ಮೇಟಿ, ಕೆ. ಎಂ.ಮಂಜುನಾಥ್, ಮುಖಂಡ ಬೂದಗುಪ್ಪದ ವಿಶ್ವನಾಥ ಸಾಹುಕಾರ್ ಅವರು ಭಾಗವಹಿಸುವರು.
ಸಾಂಸ್ಕೃತಿಕ ಕಾರ್ಯಕ್ರಮ: ಆಕಾಶವಾಣಿ ಕಲಾವಿದ ಸಿ.ಎಂ. ಸಾರಂಗಮಠ ಮತ್ತು ಎನ್. ಲೋಕೇಶ್ ಶಿಡಗಿನಮೊಳ ಇವರಿಂದ ಸುಗಮ ಸಂಗೀತ ಮತ್ತು ವಚನ ಗಾಯನ, ಶ್ರೀಮತಿ ಸುಜಾತಮ್ಮ ಮತ್ರು ಶ್ರೀಮತಿ ಎರ್ರೆಮ್ಮ ತಂಡದಿಂದ ರಂಗ ಗೀತೆ ಮತ್ತು ಬಯಲಾಟ ಪದಗಳು, ಇಂದ್ರಾಣಿ ನಾಟ್ಯ ಕಲಾ ತಂಡದಿಂದ ಸಮೂಹ ನೃತ್ಯ ಗಾಯನ ಪ್ರಸ್ತುತ ಪಡಿಸುವರು.
ವಿಶೇಷ ಆಕರ್ಷಣೆ: ರಾಮಾಯಣ ಬಯಲಾಟ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಲಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ಬಿ. ಲಕ್ಷ್ಮೀನಾರಾಯಣ ತಿಳಿಸಿದ್ದಾರೆ. ಬಳ್ಳಾರಿ ಆಕಾಶವಾಣಿ ಅರೆಕಾಲಿಕ ಉದ್ಘೋಷಕ ಬಸವರಾಜ ಅಮಾತಿ ಕಾರ್ಯಕ್ರಮ ನಿರೂಪಿಸುವರು.
——