ಮಾನವೀಯ ಮೌಲ್ಯಗಳನ್ನು ಕೀರ್ತನೆಗಳ ಮೂಲಕ ಸಾರಿದ ಶ್ರೇಷ್ಠ ದಾರ್ಶನಿಕ ಕನಕದಾಸರು -ಡಾ. ದಸ್ತಗೀರಸಾಬ್  ದಿನ್ನಿ

ಬಳ್ಳಾರಿ, ನ. ೩೦: ಮನುಷ್ಯನ ಮನಸ್ಸಿನ ಒಳತೋಟಿ, ಬದುಕಿನ ನಿಗೂಢತೆ, ಸಾಮಾಜಿಕ ಕೆಡುಕು ಮತ್ತು ಮಾನವೀಯ ಮೌಲ್ಯಗಳನ್ನು ಕೀರ್ತನೆಗಳ ಮೂಲಕ ಸಾರಿ ಹೋದ ಕನಕದಾಸರು ಸರ್ವ ಶ್ರೇಷ್ಠ ಚಿಂತಕರಾಗಿದ್ದಾರೆ ಎಂದು  ಕನ್ನಡ ವಿಭಾಗದ ಮುಖ್ಯಸ್ಥರಾದ   ಡಾ. ದಸ್ತಗೀರಸಾಬ್  ದಿನ್ನಿ ಅವರು ಹೇಳಿದರು.            ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ‘ ಕನಕದಾಸ ಜಯಂತಿ ‘ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.                                      ವ್ಯವಸ್ಥೆಯಲ್ಲಿ ಕಂಡ ಜಾತಿಯತೆ ,ಕರ್ಮಠತನ , ಮೂಢನಂಬಿಕೆ ಮುಂತಾದವುಗಳ ವಿರುದ್ಧ ತೀವ್ರವಾದ ಪ್ರತಿರೋಧವನ್ನು ಒಡ್ಡಿದ ಕನಕದಾಸರ ಕೀರ್ತನೆಗಳಲ್ಲಿ ಆಳವಾದ ಮಾನವ ಪ್ರೇಮ , ಬಂಡಾಯ ಪ್ರಜ್ಞೆ ಇದೆ ಎಂದರು.                                                         ನಿತ್ಯದ ತಲ್ಲಣಗಳಿಗೆ ತೀವ್ರವಾಗಿ ಮುಖಾಮುಖಿಯಾಗುವ ಅವರ ಸಾಹಿತ್ಯ ಲೋಕದರ್ಶನವನ್ನು ಮಾಡಿಸುವಂತಿದೆ ಎಂದು ಮಾರ್ಮಿಕವಾಗಿ ನುಡಿದರು.            ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ.ಎಚ್.ಕೆ. ಮಂಜುನಾಥರೆಡ್ಡಿ,  ಕನಕದಾಸರ ಸಾಹಿತ್ಯ ಸಾಮಾಜಿಕ ನೆಲೆಗಟ್ಟಿಯಿಂದ ಕೂಡಿದ್ದು ವಿಡಂಬನೆ ,ಆತ್ಮ ವಿಮರ್ಶೆಯನ್ನು ಒಳಗೊಂಡಿದೆ. ಈ ಹೊತ್ತಿಗೂ  ಪ್ರಸ್ತುತವಾಗುವಂತಿರುವ  ಅವರ ಆಲೋಚನಾ ಕ್ರಮವನ್ನು ನಮ್ಮದಾಗಿಸಿಕೊಳ್ಳಲು ಅವರ ಸಾಹಿತ್ಯದ ಓದಿಗೆ ನಮ್ಮನ್ನು ಒಡ್ಡಿಕೊಳ್ಳಬೇಕಾದ ಅಗತ್ಯ ಇದೆ ಎಂದು ಅಭಿಪ್ರಾಯ ಪಟ್ಟರು.                              ವೇದಿಕೆಯಲ್ಲಿ ಕಾಲೇಜಿನ ಸಾಂಸ್ಕೃತಿಕ ಸಮಿತಿಯ ಸಂಚಾಲಕ ಡಾ.ಶಶಿಕಾಂತ ಬಿಲ್ಲವ , ಸಹಾಯಕ ಪ್ರಾಧ್ಯಾಪಕಿ ಡಾ. ಪಲ್ಲವಿ ಇದ್ದರು.            ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರುಗಳಾದ ಡಾ. ಸಿ.ಎಚ್. ಸೋಮನಾಥ್, ಡಾ. ಹೊನ್ನೂರಲಿ , ರಾಮಾಂಜನೇಯ , ಡಾ.ಪ್ರಹ್ಲಾದ ಚೌಧರಿ, ಡಾ. ಶ್ರೀನಿವಾಸ ರೆಡ್ಡಿ,  ಡಾ.ಕುಂಚಂ ನರಸಿಂಹಲು, ಡಾ.ಪಂಚಾಕ್ಷರಿ, ಗುರುಬಸಪ್ಪ, ದೈಹಿಕ ಶಿಕ್ಷಣ ನಿರ್ದೇಶಕ ಪಂಪನಗೌಡ, ಸಾಲಿಯಾ, ದೊಡ್ಡ ಬಸಪ್ಪ, ರಾಮಸ್ವಾಮಿ, ಪ್ರವೀಣಕುಮಾರ, ಡಾ.ಬಸಪ್ಪ ಮತ್ತಿತರರು ಉಪಸ್ಥಿತರಿದ್ದರು .