ಬಳ್ಳಾರಿ, ಡಿ.2: ಬಳ್ಳಾರಿ ಸಾಂಸ್ಕೃತಿಕವಾಗಿ ಶ್ರೀಮಂತ ಜಿಲ್ಲೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡ ಬಿ. ವೆಂಕಟೇಶ್ ಪ್ರಸಾದ್ ಅವರು ಹೇಳಿದರು.
ನಗರದ ಸುಜಾತಮ್ಮ ಬಯಲಾಟ ಕಲಾ ಟ್ರಸ್ಟ್ ಶುಕ್ರವಾರ ಸಂಜೆ ಇಲ್ಲಿನ ಸಾಂಸ್ಕೃತಿಕ ಸಮುಚ್ಚಯದ ನಾಡೋಜ ಡಾ. ಸುಭದ್ರಮ್ಮ ಮನ್ಸೂರು ಬಯಲು ಕಲಾಮಂದಿರದಲ್ಲಿ ಆಯೋಜಿಸಿದ್ದ ‘ಕಾರ್ತೀಕ ಸಾಂಸ್ಕೃತಿಕ ಉತ್ಸವ’ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಮ್ಮ ಅನನ್ಯ ಸಾಧನೆ, ಕಲಾಸೇವೆ ಮೂಲಕ ರಾಜ್ಯದ ಸಾಂಸ್ಕೃತಿಕ ನಕ್ಷೆಯಲ್ಲಿ ಬಳ್ಳಾರಿ ಜಿಲ್ಲೆಗೆ ವಿಶೇಷ ಸ್ಥಾನಮಾನಗಳಿಸಿಕೊಟ್ಟಿರುವ ರಂಗಭೂಮಿ, ಜಾನಪದ, ಬಯಲಾಟ ಕಲಾವಿದರ ಕೊಡುಗೆ ಅಪಾರ ಎಂದು ಶ್ಲಾಘಿಸಿದರು.
ಬಯಲಾಟದ ಹಿರಿಯ ಕಲಾವಿದೆ ಸುಜಾತಮ್ಮ ಅವರು ಗಂಡುಮೆಟ್ಟಿನ ಕಲೆಯಾದ ಬಯಲಾಟ ಮತ್ತು ಕಲಾವಿದರನ್ನು ಉತ್ತೇಜಿಸಲು ಕಲಾ ಟ್ರಸ್ಟ್ ಸ್ಥಾಪಿಸಿರುವುದು ಇತರರಿಗೆ ಮಾದರಿ ಎಂದರು.
ಈ ಬಾರಿ ಸುಜಾತಮ್ಮ ಅವರು ಸೇರಿದಂತೆ ಅವಿಭಜಿತ ಬಳ್ಳಾರಿ ಜಿಲ್ಲೆಯ ಮೂವರು ಸಾಧಕರಿಗೆ ರಾಜ್ಯಮಟ್ಟದ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಲಭಿಸುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ನಾಗೇಂದ್ರ ಅವರು ಶ್ರಮಿಸಿದ್ದಾರೆ. ಜಿಲ್ಲೆಯ ಅರ್ಹ ಸಾಧಕರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ದೊರೆಯಲು ಸಚಿವರು ಅಗತ್ಯ ಕ್ರಮಕೈಗೊಳ್ಳಲಿದ್ದಾರೆ. ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದಾರೆ ಎಂದರು. ಸುಜಾತಮ್ಮ, ಉಷಾರಾಣಿ ಅವರಂತಹ
ಹಿರಿಯ ಕಲಾವಿದರೊಂದಿಗೆ ವೇದಿಕೆ ಹಂಚಿಕೊಳ್ಳುವುದೇ ತಮ್ಮ ಸೌಭಾಗ್ಯ ಎಂದು ಭಾವುಕರಾಗಿ ನುಡಿದರು.
ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ಕಹಳೆ ಡಾಟ್ ಕಾಮ್ ಸಂಪಾದಕ ಸಿ. ಮಂಜುನಾಥ್ ಮಾತನಾಡಿ, ಹಿರಿಯ ಬಯಲಾಟ ಕಲಾವಿದೆ ಸುಜಾತಮ್ಮ ಅವರು ತಮ್ಮ ಒಂಬತ್ತನೇ ವರ್ಷದಲ್ಲೇ ಬಾಲ ಕಲಾವಿದೆಯಾಗಿ ರಂಗ ಪ್ರವೇಶಿಸಿ ಆರೂವರೆ ದಶಕಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ್ದಾರೆ ಎಂದು ಪ್ರಶಂಸಿಸಿದರು.
ಸುಜಾತಮ್ಮ ಅವರನ್ನು ತೆಲುಗು ಚಿತ್ರರಂಗ ಕೈಬೀಸಿ ಕರೆದರೂ ಜಿಲ್ಲೆ ಮತ್ತು ಬಯಲಾಟದ ಮೇಲಿನ ಪ್ರೀತಿ ಅಲ್ಲಿಗೆ ಹೋಗೋಡಲಿಲ್ಲ ಎಂದರು.
ಅಪ್ರತಿಮ ಕಲಾವಿದರಾದ ಇವರಿಗೆ ಮುಂದಿನ ದಿನಗಳಲ್ಲಿ ಪದ್ಮಶ್ರೀ, ನಾಡೋಜ, ಗೌರವ ಡಾಕ್ಟರೇಟ್ ಪದವಿಗಳು ದೊರೆಯಲಿ ಎಂದು ಆಶಿಸಿದರು.
ಮತ್ತೋರ್ವ ಹಿರಿಯ ಕಲಾವಿದೆ ಉಷಾರಾಣಿ ಅವರೂ ಕೂಡಾ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹರಿದ್ದಾರೆ ಎಂದರು.
ಪತ್ರಕರ್ತರಾದ ಶಶಿಧರ ಮೇಟಿ ಅವರು ಮಾತನಾಡಿ ಗ್ರಾಮಾಂತರ ಜನರ ಬಯಲಾಟ ಪ್ರೀತಿ ಅನನ್ಯ. ಅಶಿಕ್ಷಿತರಾಗಿದ್ದರು ರಾಮಾಯಣ ಮಹಾಭಾರತದ ಕತೆಗಳನ್ನು ಆರಿಸಿಕೊಂಡು ಬಯಲಾಟವಾಡಿ ಮುಂದಿನಪೀಳೀಗಿಗೆ ಪರಿಚಯಿಸುವ ಗ್ರಾಮೀಣರ ಪ್ರತಿಭೆಯನ್ನು ಕೊಂಡಾಡಿದರು.
ಮತ್ತೋರ್ವ ಪತ್ರಕರ್ತ ಕೆ.ಎಂ ಮಂಜುನಾಥ್ ಮಾತನಾಡಿ ಅಕ್ಷರ ಕಲಿಯದವರೇ ಬಯಲಾಟವನ್ನು ಆಡಿ ಬೆಳೆಸುತ್ತಿರುವುದು ಮಾದರಿಯಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾವಂತರು ಬಯಲಾಟವನ್ನು ಕಲಿತು ಪ್ರೋತ್ಸಾಹಿಸುವ ಅಗತ್ಯವಿದೆ ಎಂದರು.
ಬಳ್ಳಾರಿಯ ಪತ್ರಕರ್ತರು ಐದು ವರ್ಷಗಳ ಹಿಂದೆ ಬಯಲಾಟವನ್ನು ಆಡುವ ಮೂಲಕ ಈ ಕಲೆಯತ್ತ ನಗರದ ವಿದ್ಯಾವಂತ ಯುವಜನರು ಬರುವಂತೆ ಉತ್ತೇಜಿಸಿದ್ದಾರೆ ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಟಿ. ಹೊನ್ನೂರಪ್ಪ ಅವರು, ಜಿಲ್ಲೆಯಲ್ಲಿ ನಾಲ್ಕು ನೂರಕ್ಕೂ ಹೆಚ್ಚು ಕಲಾವಿದರು ತಮ್ಮ ಕಲಾ ಸೇವೆಯನ್ನು ಸಲ್ಲಿಸುತ್ತಿದ್ದಾರೆ.ಅರ್ಹರಿಗೆ ಮಾಸಾಶನ ಸೇರಿದಂತೆ ಇಲಾಖೆಯ ಸೌಲಭ್ಯಗಳನ್ನು ದೊರಕಿಸಲು ಕ್ರಮಜರುಗಿಸಲಾಗುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಉಪನಿರ್ದೇಶಕ ಚೋರನೂರು ಕೊಟ್ರಪ್ಪ ಅವರು ಮಾತನಾಡಿದರು.
ಶ್ರೀ ವಾಲ್ಮೀಕಿ ಮಹರ್ಷಿ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಬಯಲಾಟ ಕಲಾವಿದೆ ಸುಜಾತಮ್ಮ,ಉಷಾರಾಣಿ, ಬೂದಗುಂಪ ಶ್ರೀ ಬಸವೇಶ್ವರ ರಂಗ ಸಜ್ಜಿಕೆಯ ವಿಶ್ವನಾಥ ಸಾಹುಕಾರ, ಕಲಾ ಟ್ರಸ್ಟ್ ಸದಸ್ಯ ಬಿ.ಶ್ರೀನಿವಾಸ್ ಮತ್ತಿತರರು ವೇದಿಕೆಯಲ್ಲಿ ಇದ್ದರು.
ಸಾಂಸ್ಕೃತಿಕ ಕಾರ್ಯಕ್ರಮ: ಆಕಾಶವಾಣಿ ಕಲಾವಿದ ಸಿ.ಎಂ. ಸಾರಂಗಮಠ ಮತ್ತು ಎನ್. ಲೋಕೇಶ್ ಶಿಡಗಿನಮೊಳ ಇವರಿಂದ ಸುಗಮ ಸಂಗೀತ ಮತ್ತು ವಚನ ಗಾಯನ, ಶ್ರೀಮತಿ ಸುಜಾತಮ್ಮ ಮತ್ರು ಶ್ರೀಮತಿ ಎರ್ರೆಮ್ಮ ತಂಡದಿಂದ ರಂಗ ಗೀತೆ ಮತ್ತು ಬಯಲಾಟ ಪದಗಳು, ಇಂದ್ರಾಣಿ ನಾಟ್ಯ ಕಲಾ ತಂಡದಿಂದ ಸಮೂಹ ನೃತ್ಯ ಗಾಯನ ಪ್ರಸ್ತುತ ಪಡಿಸಿದರು.
ಬೂದಗುಂಪ ಶ್ರೀ ಬಸವೇಶ್ವರ ರಂಗ ಸಜ್ಜಿಕೆ ವತಿಯಿಂದ ರಾಮಾಯಣ ಬಯಲಾಟವನ್ನು ಪ್ರದರ್ಶಿಸಲಾಯಿತು.
ಟ್ರಸ್ಟ್ ಕಾರ್ಯದರ್ಶಿ ಬಿ. ಲಕ್ಷ್ಮೀನಾರಾಯಣ ಸ್ವಾಗತಿಸಿದರು. ಬಳ್ಳಾರಿ ಆಕಾಶವಾಣಿ ಉದ್ಘೋಷಕ ಬಸವರಾಜ ಅಮಾತಿ ಕಾರ್ಯಕ್ರಮ ನಿರೂಪಿಸಿದರು. ಕುಸುಮ ವಂದಿಸಿದರು.