ನೀನು ನನ್ನ ನಗುವನ್ನು ಕಿತ್ತುಕೊಳ್ಳ ಬಯಸಿದೆ
ಎಳೆಯ ಹೊರಟಿದ್ದೆ
ನನ್ನ ತುಟಿಗಳ ಮೇಲೆ
ನಿನ್ನದೇ ನೋವಿನ ಗೆರೆಯನ್ನು
ಹಿಂಡಬೇಕೆಂದಿದ್ದೆ
ನಿನ್ನ ಮುಷ್ಟಿಯಲ್ಲಿ ಹಿಡಿದು
ನರಳಿಸಿ ನೇಯ ಬೇಕೆಂದಿದ್ದೆ
ನನ್ನ ಬದುಕ ಕೌದಿಯನ್ನು
ಎಲೆ ಮರುಳೇ..
ನನ್ನ ಖುಷಿ ಈ ಚೌಕಟ್ಟಿನಾಚೆಯದ್ದು
ಹೊದ್ದಿರುವೆ ಸುಖದ ಚಾದರವನ್ನು
ಹಿಡಿಯಲಾರೆ ನಿನ್ನ ಮುಷ್ಟಿಯೊಳಗೆ
ಕಸಿಯಲಾರೆ ನನ್ನೀ ನಗುವನ್ನು
ನರಳಿಸಿದರೂ
ನೋಯಿಸಿದರೂ
ಚಿಗುರುತ್ತೇನೆ ಕಲ್ಲ ಮೇಲಿನ ಅರಳಿ ಗಿಡದ ಹಾಗೆ
ಇರುತ್ತೇನೆ ಎಲೆಯ
ಪರಿಮಳದ ಹಾಗೆ
ಮತ್ತು….
ಇರುತ್ತೇನೆ
ದ್ವೇಷವೆಂಬ ನಿನ್ನ ಕಣ್ಣುರಿಯುವ ಕಿಚ್ಚಿನ ಮುಂದೆ
ಬೆಳಗುತ್ತಲೇ ಇರುವೆ
ಸದಾ ಮಿನುಗುವ ನಕ್ಷತ್ರಗಳ ಹಾಗೆ…
-ಭಾರತಿ ಹೆಗಡೆ, ಬೆಂಗಳೂರು
*****