ಬಳ್ಳಾರಿ, ಡಿ.7: ಸ್ಥೂಲಕಾಯತೆಯು ಹದಿಹರೆಯದ
ಯುವಕ ಯುವತಿಯರಲ್ಲಿ ಮಧುಮೇಹ, ಅತಿ ರಕ್ತದೊತ್ತಡ, ಹೃದಯ ರಕ್ತನಾಳದ ಖಾಯಿಲೆಗಳು, ಗೊರಕೆಯ ಸಮಸ್ಯೆ ಮತ್ತು ನಿದ್ರಾವಸ್ಥೆಯಲ್ಲಿ ಉಸಿರುಕಟ್ಟುವಿಕೆ ಇತ್ಯಾದಿ ರೋಗಗಳಿಗೆ ಕಾರಣೀಭೂತವಾಗಿದೆ ಎಂದು ಬೆಂಗಳೂರಿನ ಮಣಿಪಾಲ ಆಸ್ಪತ್ರೆಯ ಕನ್ಸಲ್ಟೆಂಟ್ (ಬ್ಯಾರಿಯಾಟ್ರಿಕ್ ಹಾಗೂ ಅಡ್ವಾನ್ಸೆಡ್ ಲ್ಯಾಪರೊಸ್ಕೋಪಿಕ್ ಸರ್ಜರಿ) ಡಾ. ಜಿ ಮೊಯಿನೋದ್ದೀನ್ ಅವರು ಹೇಳಿದರು.
ನಗರದ ಖಾಸಗಿ ಹೊಟೇಲ್‌ನಲ್ಲಿ ಬುಧವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕೀಲು ನೋವು, ಬೆನ್ನು ನೋವುಗಳಿಗೂ ಬೊಜ್ಜು ಕಾರಣವಾಗಬಹುದು. ವಿಶೇಷವಾಗಿ ಹದಿ-ಹರಯದಲ್ಲಿ ಸ್ತ್ರೀಯರಲ್ಲಿ ಸ್ಥೂಲಕಾಯತೆಯು ಪಾಲಿಸಿಸ್ಟಿಕ್ ಓವೆರಿಯನ್ ಸಿಂಡ್ರೋಮ್ (PCOS) ಮತ್ತು ಹೈಪೊರ್ತಿರೋಯಿಡ್ (hypothyroidism) ಗಳಿಗೂ ಕಾರಣವಾಗಬಹುದು ಎಂದು ತಿಳಿಸಿದರು.
ಪಾಲಿಸಿಸ್ಟಿಕ್ ಓವೆರಿಯನ್ ಸಿಂಡ್ರೋಮ್ ಅಂಡಾಶಯದ ಕಾಯಿಲೆಯಾಗಿದ್ದು ಬಂಜೆತನಕ್ಕೂ ಕಾರಣವಾಗಬಹುದು. ಬೊಜ್ಜು ಮತ್ತು ಸ್ಥೂಲಕಾಯತೆಯಿಂದ ಪೀಡಿತ ವ್ಯಕ್ತಿಗಳಲ್ಲಿ ಚಲನ ವಲನ ಕುಂಠಿತವಾಗುತ್ತದೆ, ಮದುವೆ ಮತ್ತು ಸಂಸಾರ ಗಳಂತಹ ಜೀವನದ ಮಹತ್ತರ ಘಟ್ಟಗಳಿಗೂ ತೊಂದರೆ ಮಾಡುತ್ತದೆ. ಅಷ್ಟೇ ಅಲ್ಲದೆ ಬೊಜ್ಜು ಹಾಗೂ ಸ್ಥೂಲಕಾಯತೆಯು ವ್ಯಕ್ತಿಯನ್ನು ಮಾನಸಿಕವಾಗಿಯೂ ಹಾಗೂ ದೈಹಿಕವಾಗಿಯೂ ಕುಗ್ಗಿಸುತ್ತದೆ. ಅವರು ದಿನನಿತ್ಯದ ಕಾರ್ಯಗಳನ್ನು ನಿಭಾಯಿಸುವ ಕ್ಷಮತೆಯನ್ನು ಕುಂಠಿತಗೊಳಿಸುತ್ತದೆ ಎಂದು ವಿವರಿಸಿದರು.
ಇತ್ತೀಚಿಗಷ್ಟೇ ಕೋವಿಡ್ ಸಾಂಕ್ರಾಮಿಕ ಮಹಾಮಾರಿಯ ವಿರುದ್ಧ ಹೋರಾಡಿ ಸುಧಾರಿಸಿಕೊಳ್ಳುತ್ತಿರುವ ಸಮಾಜಕ್ಕೆ, ಬೊಜ್ಜು ಮತ್ತು ಸ್ಥೂಲಕಾಯತೆಯ ವಿರುದ್ಧ ಮತ್ತೊಂದು ಮಹಾಸಮರಕ್ಕೆ ಅಣಿಯಾಗುವ ಸವಾಲು ಎದುರಾಗಿದೆ ಎಂದರು.
ಬೊಜ್ಜು ಅಥವಾ ಸ್ಥೂಲಕಾಯತೆ ಸಾಂಕ್ರಾಮಿಕ ಅಲ್ಲದಿದ್ದರೂ, ಅದು ಮಹಾಮಾರಿಗೆ ಕಡಿಮೆ ಏನಲ್ಲ ಎನ್ನುತ್ತಾರೆ ವೈದ್ಯರು. ಬ್ಯಾರಿಯಾಟ್ರಿಕ್ ಸರ್ಜರಿಯು ಸುರಕ್ಷಿತ ಹಾಗೂ ಬೊಜ್ಜು ನಿವಾರಣೆಗೆ ಅತ್ಯಂತ ಪರಿಣಾಮಕಾರಿ ಚಿಕಿತ್ಸೆಯಾಗಿದೆ. ಈ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದು ಡಾ. ಜಿ ಮೊಯಿನೋದ್ದೀನ್ ಹೇಳಿದರು.
“ಬೊಜ್ಜು ಹಾಗೂ ಸ್ಥೂಲಕಾಯತೆಯ ವ್ಯಾಪಕ ಸಮಸ್ಯೆಯನ್ನು ಎದುರಿಸುವ ನಿಟ್ಟಿನಿಂದ, ಬೆಂಗಳೂರಿನ ಮಿಲ್ಲರ್ ರಸ್ತೆಯಲ್ಲಿರುವ ಮಣಿಪಾಲ ಆಸ್ಪತ್ರೆ ಹೊಸದಾಗಿ ಬೊಜ್ಜು ಹಾಗೂ ಸ್ಥೂಲಕಾಯತೆಯ ನಿವಾರಣೆಗೆಂದೇ ನಿಯೋಜಿತ ಕ್ಲಿನಿಕ್ ಆರಂಭಿಸಿದೆ ಎಂದು ಮಾಹಿತಿ ನೀಡಿದರು.
ಮದುಮೇಹ ತಜ್ಞರು, ಎಂಡೋಕ್ರಿನೊಲೊಜಿಸ್ಟ್, ಆಹಾರ ಮತ್ತು ಪೌಷ್ಟಿಕಾಂಶ ತಜ್ಞರು, ಬ್ಯಾರಿಯಾಟ್ರಿಕ್ ಶಸ್ತ್ರಚಿಕಿತ್ಸೆ ತಜ್ಞರು, ಒಟ್ಟಾಗಿ ಬೊಜ್ಜು ಹಾಗೂ ಸ್ಥೂಲಕಾಯದ ನಿವಾರಣೆಗೆ ಸಮಗ್ರ ಚಿಕಿತ್ಸೆಗೆ ಇಲ್ಲಿ ಲಭ್ಯವಿರುವುದು ಈ ಕ್ಲಿನಿಕ್ಕಿನ ವೈಶಿಷ್ಟ್ಯವಾಗಿದೆ. ಇಲ್ಲಿ, ಪ್ರತಿಯೊಬ್ಬರ ಸಮಸ್ಯೆಯನ್ನು ಕೂಲಂಕುಷವಾಗಿ ಅರಿತು ಅವರಿಗೆ ತಕ್ಕ ಚಿಕಿತ್ಸೆ ನೀಡಲಾಗುತ್ತದೆ.” ಎಂದು ತಿಳಿಸಿದರು.
“ಬ್ಯಾರಿಯಾಟ್ರಿಕ್ ಸರ್ಜರಿ ಬಗ್ಗೆ ಸಮಾಜದಲ್ಲಿ ಸಾಕಷ್ಟು ತಪ್ಪು ಕಲ್ಪನೆ ಹಾಗೂ ಊಹಾ-ಪೋಹಗಳಿವೆ. ಆದರೆ ಬ್ಯಾರಿಯಾಟ್ರಿಕ್ ಸರ್ಜರಿಯು ಸುರಕ್ಷಿತ ಹಾಗೂ ಬೊಜ್ಜು ನಿವಾರಣೆಗೆ ಅತ್ಯಂತ ಪರಿಣಾಮಕಾರಿ. ಜನರು ಇಂತಹ ಊಹಾ-ಪೋಹಗಳಿಗೆ ಕಿವಿಗೊಡದೆ, ನುರಿತ ವೈದ್ಯರನ್ನು ಸಂದರ್ಶಿಸಿ ತಮ್ಮ ಸಮಯೆಗಳಿಗೆ ಸೂಕ್ತ ಪರಿಹಾರದ ಬಗ್ಗೆ ತಿಳಿದುಕೊಳ್ಳಬೇಕು” ಎಂದರು.
ಇತ್ತೀಚಿನ ದಿನಗಳಲ್ಲಿ ಬಳ್ಳಾರಿ ಹಾಗೂ ಸುತ್ತಮುತ್ತಲಿನ ಊರುಗಳ 50 ಕ್ಕೂ ಅಧಿಕ ಜನರು ಸ್ಥೂಲಕಾಯತೆಯ ನಿವಾರಣೆಗೆ ತಮ್ಮನ್ನು ಭೇಟಿಯಾಗಿದ್ದಾರೆ ಹಾಗೂ ಬ್ಯಾರಿಯಾಟ್ರಿಕ್ ಸರ್ಜರಿಯ ಸಹಾಯದಿಂದ, ಬೊಜ್ಜು ಹಾಗೂ ಸ್ಥೂಲಕಾಯದಿಂದ ಮುಕ್ತಿ ಪಡೆದಿರುವುದಾಗಿ ಅವರು ತಿಳಿಸಿದರು.
ಬೊಜ್ಜು ಹಾಗೂ ಸ್ಥೂಲಕಾಯ ನಿವಾರಣೆಯು ಒಬ್ಬ ವ್ಯಕ್ತಿಯನ್ನು ರೋಗಗಳಿಂದ ಮಾತ್ರ ಮುಕ್ತವಾಗಿಸುವುದಿಲ್ಲ ಬದಲಾಗಿ ರೋಗರಹಿತ ದೀರ್ಘಾಯುಷ್ಯ ಹಾಗೂ ಸುಧಾರಿತ ಜೀವನದ ಗುಣಮಟ್ಟವನ್ನು ಕಲ್ಪಿಸುತ್ತದೆ ಎಂಬುದನ್ನು ಅವರು ಅನುಮೋದಿಸಿದರು.
ಸುದ್ದಿಗೋಷ್ಟಿಯಲ್ಲಿ ಡಾ. ಜಿ ಮೊಯಿನೋದ್ದೀನ್ ಅವರಿಂದ ಬ್ಯಾರಿಯಾಟ್ರಿಕ್ ಸರ್ಜರಿಗೆ ಒಳಗಾದ 8 ಜನರು ಉಪಸ್ಥಿತರಿದ್ದರು. ಇವರೆಲ್ಲ ತಮ್ಮ ಸ್ಥೂಲಕಾಯತೆಯ ಸಮಸ್ಯೆಯನ್ನು ಎದುರಿಸಿ, ಆರೋಗ್ಯಕರ ಜೀವನಕ್ಕೆ ಮರಳಿದ ವ್ಯಕ್ತಿಗಳಾಗಿದ್ದರು. ಇವರ ಉಪಸ್ಥಿತಿಯು, ಬೊಜ್ಜು ಮತ್ತು ಸ್ಥೂಲಕಾಯತೆ ಹಾಗೂ ಅದರಿಂದ ಉಂಟಾಗುವ ಹತ್ತು ಹಲವು ಅರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ಜನರಿಗೆ, ಊಹಾ-ಪೋಹಗಳಿಗೆ ಬಲಿಯಾಗದೆ, ಧೈರ್ಯದಿಂದ ಬ್ಯಾರಿಯಾಟ್ರಿಕ್ ಸರ್ಜರಿಗೆ ಮುಂದೆ ಬಂದು ಸ್ಥೂಲಕಾಯತೆ ಇಂದ ಮುಕ್ತಿಹೊಂದಬೇಕು ಎಂದು ತಜ್ಞ ವೈದ್ಯ ಡಾ. ಮೊಯಿನೋದ್ದೀನ್ ಅವರು ಮನವಿ ಮಾಡಿದರು.
——