ನಕ್ಷತ್ರಗಳು
ಹುಂಜದ ಕೂಗಿಗೆ ಮೈ ಮುರಿಯುತ್ತಾ ಏಳುತ್ತಿದ್ದೆವಾಗ
ಆಜಾನ್ ಸದ್ದಿಗೆ ಎದ್ದು ಕುಳಿತುನೋಡಿದರೆ
ಬಯಲಿನಲ್ಲಿ ಆಗಸ ಗೋಚರ
ಕಣ್ಣಿಗೆ ಕಂಡಾಗ’ಬೆಳ್ಳಿ ಚುಕ್ಕಿ’
ನನ್ನಜ್ಜ ಹೇಳುತ್ತಿದ್ದ ಅದು’ಧೃವ ನಕ್ಷತ್ರ’ಎಂದು
ಉಳಿದ ನಕ್ಷತ್ರಗಳ ಬಗ್ಗೆ ಕೇಳಿದಾಗ “ಸತ್ತವರೆಲ್ಲಾ ನಕ್ಷತ್ರಗಳಾಗುತ್ತಾರೆ” ಎನ್ನುತ್ತಿದ್ದರು
ಬಾಲ್ಯದಲ್ಲಿ “ಅಮ್ಮನ ಸೀರೆ ಮಡಚಲಾರೆ ಅಪ್ಪ ನ ರೊಕ್ಕ ಎಣಿಸಲಾರೆ” ಎಂದು ಬ್ರಹ್ಮಾಂಡದ ಲಘು ಪರಿಚಯ ವಾಗಿತ್ತು
ಹಾಗೆಯೇ ಮೇಲೆ ನೋಡಲು ಕಣ್ಣಿಗೆ ಅವೇ ನಕ್ಷತ್ರಗಳು ಅದೇ ಮುಗಿಲು
ನಮಗಾಗುತ್ತಿಲ್ಲ ದಿಗಿಲು
ಮೊನ್ನೆ ಮೊಮ್ಮಗ ಬ್ರಹ್ಮಾಂಡದ ಬಗ್ಗೆ ಏನೇನೋ ಕೇಳುತ್ತಿದ್ದ
ಡಿಜಿಟಲ್ ಯುಗಕ್ಕೆ ನಾನಿನ್ನೂ ಹೊಸಬ,ನಾನು ತಲೆ ಕೆರೆದು ಕೊಳ್ಳುವ ಹೊತ್ತಿಗೆ ಗೂಗಲ್ ಪ್ರವೇಶಿಸಿ ಮೊಮ್ಮಗ ಹೊರಬಂದಿದ್ದ”ನಕ್ಷತ್ರಗಳ ಸಂಖ್ಯೆ ಎಷ್ಟು ಗೊತ್ತಾ”ಪ್ರಶ್ನೆ ಮಾಡಿದ”ಗೊತ್ತಿಲ್ಲ “ನಾನೆಂದೆ
ಅವ ಹೇಳಿದ್ದುಬಿಲಿಯನ್,ಟ್ರಿಲಿಯನ್
ಮತ್ತೆ ನನ್ನಜ್ಜ ನೆನಪಾದ
” ಸತ್ತವರೆಲ್ಲಾ ನಕ್ಷತ್ರ ಗಳಾಗುತ್ತಾರೆ”
ಇದ್ದರೂಇರಬಹುದು
ಇಲ್ಲಿರುವುದು ಸುಮ್ಮನೆ ಅಲ್ಲಿರುವುದು ನಮ್ಮನೆ.
-ಪ್ರಕಾಶ್ ಮಲ್ಕಿಒಡೆಯರ್, ಹೂವಿನ ಹಡಗಲಿ
*******************