ತೆಲಂಗಾಣದ ನೂತನ ಸರ್ಕಾರದಲ್ಲಿ ದನಸರಿ ಅನುಸೂಯಾ ಎಂಬ ಹೆಸರಿನ ಹಾಗೂ ಸೀತಕ್ಕ ಎಂದು ಗುರುತಿಸಲ್ಪಟ್ಟ 52 ವರ್ಷದ ಈ ಹಳ್ಳಿಗಾಡಿನ ಅಪ್ಪಟ ಮಹಿಳೆಯ ಕಥನ ಅಚ್ಚರಿ ಹುಟ್ಟಿಸುವಂತಹದ್ದು. ದನಸರಿ ಅನಸೂಯಾ ಈಗ ಡಾ.ದನಸರಿ ಅನುಸೂಯಾ ಮತ್ತು ತೆಲಂಗಾಣ ದ ಸಚಿವೆ.
ತಾನು ಹುಟ್ಟಿಬಂದ ಗೊಟ್ಟ ಕೊಯ ಎಂಬ ಆದಿವಾಸಿ ಸಮುದಾಯದ ಬಗ್ಗೆ ಉಸ್ಮಾನಿಯಾ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದಲ್ಲಿ ಪಿ.ಹೆಚ್.ಡಿ. ಮಾಡಿರುವ ಈ ಹೆಣ್ಣು ಮಗಳು ಮೂರು ದಶಕದ ಹಿಂದೆ ತನ್ನ ಸಮುದಾಯದ ಜನರು ಅನ್ಯಾಯಕ್ಕೆ ಒಳಗಾದಾಗ ಅವರ ಪರವಾಗಿ ಬಂದೂಕ ಹಿಡಿದಿದ್ದು ಈಗ ಇತಿಹಾಸ.
ನಕ್ಸಲ್ ಸಂಘಟನೆಯಲ್ಲಿ ಕಮಾಂಡರ್ ಆಗಿದ್ದ ಸೀತಕ್ಕ ನಂತರದ ದಿನಗಳಲ್ಲಿ ಬಂದೂಕ ಕೆಳಗಿಟ್ಟು, ಕಾನೂನು ಪದವಿ ಪಡೆದು ವಕೀಲೆಯಾಗಿ ಅರಣ್ಯದ ಅಂಚಿನಲ್ಲಿರುವ ತನ್ನ ಜನರ ಪರವಾಗಿ ಸಮಾಜದೊಳಗೆ ಇದ್ದುಕೊಂಡೇ ಹೋರಾಟ ನಡೆಸಿದ್ದಳು.
ಮುಲ್ಲಗು ಎಂಬ ಗುಡ್ಡಗಾಡು ಮತ್ತು ಅರಣ್ಯ ಪ್ರದೇಶದ ಈ ಕ್ಷೇತ್ರದಲ್ಲಿ ಸೀತಕ್ಕ ಮೂರನೇ ಬಾರಿ ಕಾಂಗ್ರೇಸ್ ಪಕ್ಷದ ಶಾಸಕಿಯಾಗಿ ಆಯ್ಕೆಯಾಗಿ ಈಗ ಸಚಿವೆಯಾಗಿದ್ದಾಳೆ.
ಕೋವಿಡ್ ಸಮಯದಲ್ಲಿ ತನ್ನ ಕ್ಷೇತ್ರದ ಜನತೆಗೆ ರಸ್ತೆಯಿಲ್ಲದ ಗುಡ್ಡಗಾಡಿನಲ್ಲಿ ನಡೆದು ಆಹಾರ, ಔಷಧ ತಲುಪಿಸಿದ ಅಪ್ಪಟ ದೇಶಿ ನೆಲದ ಹೃದಯವಂತ ಹೆಣ್ಣುಮಗಳು ಈಕೆ. ಎರಡು ವರ್ಷದ ಹಿಂದೆ ಸೀತಕ್ಕನ ಸೇವೆಯ ಬಗ್ಗೆ ಬರೆದಿದ್ದೆ.
ಚಂದ್ರಬಾಬುನಾಯ್ಡು ಆಳ್ವಿಕೆಯಲ್ಲಿ ಆಂಧ್ರ ಸರ್ಕಾರ ಶರಗಾತರಾಗುವ ನಕ್ಸಲಿಯರಿಗೆ ಕ್ಷಮದಾನ ನೀಡಲು ಯೋಜನೆ ರೂಪಿಸಿದಾಗ ಸೀತಕ್ಕ, ಬಂದೂಕವನ್ನು ಕೆಳಗಿಟ್ಟು, ಸಮಾಜದ ಮುಖ್ಯವಾಹಿನಿಯಲ್ಲಿ ಇದ್ದುಕೊಂಡು ತನ್ನ ಜನತೆಯ ಪರವಾಗಿ ಹೋರಾಡಲು ನಿರ್ಧರಿಸಿದಳು.ಅದು ಈಗ ಉಳಿದವರಿಗೆ ವಿಶೇಷವಾಗಿ ನಕ್ಸಲಿಯರಿಗೆ ಮಾದರಿಯಾಗಿದೆ.
ಎರಡು ಬಾರಿ ಶಾಸಕಿಯಾಗಿದ್ದ ಸೀತಕ್ಕ ಯಾವಾಗಲೂ ಹಳ್ಳಿಗಳಲ್ಲಿ ಮತ್ತು ಸಂತೆಗಳಲ್ಲಿ ಜನರೊಂದಿಗೆ ಕುಳಿತು ಅವರ ಸಮಸ್ಯೆಗಳನ್ನು ಆಲಿಸಿ ಬಗೆಹರಿಸುತ್ತಿದ್ದಳು. ಅವಳ ಬದ್ಧತೆ ಮತ್ತು ಕಾರ್ಯಕ್ಷಮತೆ ಇಂದು ಸೀತಕ್ಕನನ್ನು ಸಚಿವೆಯ ಸ್ಥಾನಕ್ಕೆ ತಂದು ಕೂರಿಸಿದೆ.
ಸಿನಿಮಾ ನಟಿಯರು ಬಣ್ಣ ಬಣ್ಣದ ಬಟ್ಟೆ ತೊಡುವುದು, ಅವರು ವಿವಾಹವಾಗುದು, ಗರ್ಭ ಧರಿಸುವುದು, ಮಕ್ಕಳನ್ನು ಪಡೆಯುವ ಸುದ್ದಿ ಪ್ರಕಟಿಸುವುದೇ ಪತ್ರಿಕೋದ್ಯಮ ಎಂದುಕೊಂಡ ಆಧುನಿಕ ಜಗತ್ತಿನ ಪತ್ರಕರ್ತರು ಇಂತಹ ಸೀತಕ್ಕ ನಂತಹ ಹೆಣ್ಣುಮಕ್ಕಳ ಬಗ್ಗೆಯೂ ಸಹ ಯೋಚಿಸಬೇಕಿದೆ.
-ಜಗದೀಶ್ ಕೊಪ್ಪ, ಮೈಸೂರು
—–