ಬದುಕನ್ನು ಉನ್ನತೀಕರಿಸಿದ ಮಹಾಕವಿ ರತ್ನಾಕರವರ್ಣಿ -ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್

ಶ್ರವಣ ಬೆಳಗೊಳ, ಡಿ.9: ಅನುಭವ ಮತ್ತು ಅನುಭಾವ ಸಂಗಮವಾದ ಕನ್ನಡ ಸಾಹಿತ್ಯದಲ್ಲಿ ಸಾರ್ಥಕ ಬದುಕಿಗೆ ಪ್ರೇರೇಪಿಸುವ ನಿಜದಾರಿಗಳಿವೆ. ಯೋಗ ಮತ್ತು ಭೋಗ ಜೀವನವನ್ನು ಸಮನ್ವಯಗೊಳಿಸಿ ಬದುಕನ್ನು ಉನ್ನತೀಕರಿಸಿದ ಮಹಾಕವಿ ರತ್ನಾಕರವರ್ಣಿ ಎಂದು ಕುವೆಂಪು ವಿವಿ ಸಹಾಯಕ ಪ್ರಾಧ್ಯಾಪಕ ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್ ಅವರು ಅಭಿಪ್ರಾಯ ಪಟ್ಟರು.                    ಅವರು ಮಂಗಳೂರು ವಿಶ್ವವಿದ್ಯಾನಿಲಯದ ರತ್ನಾಕರವರ್ಣಿ ಅಧ್ಯಯನ ಪೀಠ ಮತ್ತು ಜೈನ ಮಠ ಸಹಯೋಗದಲ್ಲಿ ಶ್ರವಣಬೆಳಗೊಳದ ಆದಿಕವಿ ಪಂಪ ಸಭಾಂಗಣದಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ರತ್ನಾಕರವರ್ಣಿಯ ಆಧ್ಯಾತ್ಮಿಕ ಚಿಂತನೆಗಳು ಕುರಿತು ಅವರು ವಿಷಯ ಮಂಡಿಸಿದರು.                                ಭೋಗದಲ್ಲಿ ಬೇರು ಬಿಟ್ಟು, ಸಾಧನೆಯ ಮೂಲಕ ಮೇಲಕ್ಕೆ ಚಿಮ್ಮಿ ಯೋಗದಲ್ಲಿ ಹೂವಾಗುವ ಬೆಳವಣಿಗೆಯೇ ಅತ್ಯಂತ ಶ್ರೇಷ್ಠವೆಂಬುದು ರತ್ನಾಕರವರ್ಣಿಯ ಆಧ್ಯಾತ್ಮಿಕ ಚಿಂತನೆ ಎಂದರು.              ವಿಚಾರಸಂಕಿರಣ ಉದ್ಘಾಟಿಸಿ ಮಾತನಾಡಿದ ಪ್ರಾಧ್ಯಾಪಕ ಪ್ರೊ.ಚಂದ್ರಕಿರಣ ಅವರು,  ರತ್ನಾಕರವರ್ಣಿಯ ಚಿಂತನೆ ವಾಸ್ತವ ಬದುಕಿಗೆ ತುಂಬಾ ಹತ್ತಿರವೆಂದರು. ಡಾ.ಎಚ್.ಕೆ.ವೆಂಕಟೇಶ್, ಡಾ.ಮುಸ್ತಫಾ, ಡಾ.ಭಾಗ್ಯವತಿ ಪ್ರಬಂಧಗಳನ್ನು ಮಂಡಿಸಿದರು. ಯುದ್ದ ವಿರೋಧ ನೀತಿಯನ್ನು ಪ್ರತಿಪಾದಿಸಿದ ಪ್ರಗತಿಪರ ಚಿಂತಕ ಕವಿ ರತ್ನಾಕರವರ್ಣ ಎಂದು ಡಾ. ಹಾ.ಮ‌.ನಾಗಾರ್ಜುನ ಸಮಾರೋಪ ನುಡಿಗಳನ್ನಾಡುತ್ತಾ ಅಭಿಪ್ರಾಯ ಪಟ್ಟರು. ಮುಖ್ಯ ಅತಿಥಿ ಪ್ರೊ. ಸುರೇಶ ಕುಮಾರ್ ಮಾತನಾಡಿದರು. ಡಾ.ಸೋಮಣ್ಣ ಅಧ್ಯಕ್ಷತೆ ವಹಿಸಿದ್ದರು. ಕ.ಸಾ.ಪ.ತಾ.ಅಧ್ಯಕ್ಷ ನಾಗೇಂದ್ರ ಭಾಗವಹಿಸಿದ್ದರು.                                 ಜೈನ ಅಧ್ಯಯನ ಪೀಠದ ನಿರ್ದೇಶಕ ವೃಷಭಕುಮಾರ್ ನಿರೂಪಿಸಿದರು. ಜಿ.ನಾಗರಾಜ್ ವಂದಿಸಿದರು.