ರಾಮನಗರ, ಡಿ.10 : ಜಾನಪದ ಲೋಕದ ನಾಡೋಜ ಎಚ್.ಎಲ್.ನಾಗೇಗೌಡರ ನೆನಪಿನ ಕಾರ್ಯಕ್ರಮ ಲೋಕಸಿರಿ -90 ತಿಂಗಳ ಅತಿಥಿ ಕಾರ್ಯಕ್ರಮ ಭಾನುವಾರ ಯಶಸ್ವಿಯಾಗಿ ನಡೆಯಿತು.
ನಗರದ ಹೊರವಲಯದ ಜಾನಪದ ಲೋಕದಲ್ಲಿ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ನಡೆದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಬಳ್ಳಾರಿ ಜಿಲ್ಲೆ ದರೋಜಿ ಗ್ರಾಮದ ಹಗಲುವೇಷ ಕಲಾವಿದ ಅಶ್ವರಾಮಣ್ಣ ಭಾಗವಹಿಸಿದ್ದರು.
ಕಾರ್ಯಕ್ರಮ ಉದ್ಘಾಟಿಸಿದ ಸ್ನೇಹಕೂಟ ಟ್ರಸ್ಟ್ ಅದ್ಯಕ್ಷ ಎಚ್.ಪಿ.ನಂಜೇಗೌಡ ಅವರು ಮಾತನಾಡಿ, ಎಚ್.ಎಲ್.ನಾಗೇಗೌಡರು ಬರಡು ಭೂಮಿಯನ್ನು ಜಾನಪದ ಕಾಶಿಯಾಗಿ ಪರಿವರ್ತಿಸಿದರು. ಈ ಮೂಲಕ ನಮ್ಮ ರಾಮನಗರವನ್ನು ಪ್ರಸಿದ್ದ ಗೊಳಿಸಿದ ಕೀರ್ತಿ ನಾಗೇಗೌಡರಿಗೆ ಸಲ್ಲುತ್ತದೆ ಎಂದು ಗುಣಗಾನ ಮಾಡಿದರು.
ಈ ಪುಣ್ಯಭೂಮಿ ವಿವಿಧ ಜನಪದ ಪ್ರಕಾರಗಳ ಸಾವಿರಾರು ಕಲಾವಿದರಿಗೆ ವೇದಿಕೆ ಕಲ್ಪಿಸಿದೆ. ಈ ಜನಪದ ಕಾಶಿಗೆ ಸರ್ಕಾರ ಹೆಚ್ಚು ಅನುದಾನ ಕಲ್ಪಿಸುವ ಅಗತ್ಯವಿದೆ. ಜೊತೆಗೆ ಹೆಚ್ಚು ಪ್ರವಾಸಿಗರು ಜನಪದ ಲೋಕದತ್ತ ಆಗಮಿಸುವಂತಹ ಎಲ್ಲ ಆಯಾಮಗಳ ಹೊಸ ಚಿಂತನೆಗಳತ್ತ ಜಾನಪದ ಪರಿಷತ್ತು ಅದ್ಯಕ್ಷರು ಮತ್ತು ಟ್ರಸ್ಟಿಗಳು ಚಿಂತನೆ ನಡೆಸಲಿ ಎಂದು ನಂಜೇಗೌಡ ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ವಿಜಯ್ ರಾಂಪುರ ಅವರು ಮಾತನಾಡಿ, ಹಗಲು ವೇಷ ಕಲಾವಿದರು ರಂಗಭೂಮಿ ಕ್ಷೇತ್ರವನ್ನು ಶ್ರೀಮಂತ ಗೊಳಿಸಿದವರು. ಗ್ರಾಮೀಣ ಭಾಗದಲ್ಲಿ ಪೌರಾಣಿಕ ಪಾತ್ರಗಳ ವೇಷಗಳನ್ನು ಧರಿಸಿ ಗ್ರಾಮೀಣ ಭಾಗದ ಜನರ ಮನಗೆದ್ದ ಕಲಾವಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹಗಲು ವೇಷ ಕಲೆಯ ಬಗ್ಗೆ ಅಪಾರ ಗೌರವವನ್ನು ಇಟ್ಟುಕೊಂಡು ಎಲ್ಲಿ ಹಗಲುವೇಷ ಕಲೆ ಮರೆಯಾಗುವುದೋ ಎಂಬ ಆತಂಕದಲ್ಲಿ ಅವರು ಹಗಲು ವೇಷ ಕಲೆಯನ್ನು ಉಳಿಸಿ ಬೆಳೆಸುತ್ತಾ ಮಹಾಭಾರತ, ರಾಮಾಯಣ ನಾಟಕಗಳ ಪಾತ್ರಗಳನ್ನು ವರ್ಷವಿಡೀ ಪಸರಿಸುತ್ತಾ ಬರುತ್ತಿದ್ದಾರೆ ಎಂದರು. ಸಂಕಷ್ಟದಲ್ಲಿರುವ ಇಂತಹ ಕಲಾವಿದರಿಗೆ ಇಡೀ ಸಮಾಜ ಅವರ ಕಲೆಗೆ ಗೌರವ ಕೊಟ್ಟು ಪ್ರೋತ್ಸಾಹ ನೀಡಬೇಕಿದೆ. ಈ ನಿಟ್ಟಿನಲ್ಲಿ ಜಾನಪದ ಲೋಕ ವಿವಿಧ ಜನಪದ ಪ್ರಕಾರಗಳ ಕಲಾವಿದರನ್ನು ಹುಡುಕಿ ತಿಂಗಳ ಅತಿಥಿಯಾಗಿ ಕರೆಸಿ ಅವರ ಕಲೆಗೆ ಪ್ರೋತ್ಸಾಹ ನೀಡುವ ನಾಗೇಗೌಡರ ಕನಸ್ಸು ಸಾರ್ಥಕಗೊಳಿಸುವ ಕೆಲಸ ನಡೆಯುತ್ತಿದೆ ಎಂದು ಶ್ಲಾಘಿಸಿದರು.
ಅಲೆಮಾರಿ ಬುಡ್ಗ ಜಂಗಮ ಜನಾಂಗದ ರಾಜ್ಯಾಧ್ಯಕ್ಷ ಶೇಷಪ್ಪ ಭಾಗವಹಿಸಿ ಮಾತನಾಡಿದರು.
ಲೋಕಸಿರಿ ಗೌರವ:ಕಾರ್ಯಕ್ರಮದಲ್ಲಿ ಲೋಕಸಿರಿ-90ರ ಗೌರವ ಅತಿಥಿ ಅಶ್ವರಾಮಣ್ಣ ಅವರಿಗೆ ಜಾನಪದ ಪರಿಷತ್ತು ವತಿಯಿಂದ 5 ಸಾವಿರ ನಗದು, ಪ್ರಶಸ್ತಿಪತ್ರ ನೀಡಿ ಗೌರವ ಸಮರ್ಪಣೆ ಮಾಡಲಾಯಿತು.
ಮಂಡ್ಯ ಜಾನಪದ ಪರಿಷತ್ತಿನ ಕಾರ್ಯದರ್ಶಿ ಕೀಲಾರ ಕೃಷ್ಣೇಗೌಡ, ಜಾನಪದ ಲೋಕದ ಆಡಳಿತಾಧಿಕಾರಿ ಸರಸವಾಣಿ, ಕ್ಯುರೇಟರ್ ರವಿಕುಮಾರ್ ಮತ್ತಿತರ ಗಣ್ಯರು, ಕಲಾವಿದರು ಇದ್ದರು.
——