“ಇದು ಬೆಳಕಿನ ಝೇಂಕಾರದ ಕವಿತೆ. ಬದುಕಿನ ಬೆರಗಿನ ಸಾಕಾರದ ಭಾವಗೀತೆ. ಇಲ್ಲಿ ಆಳಕ್ಕಿಳಿದಷ್ಟೂ ಅರ್ಥಗಳ ವಿಶಾಲ ಹರಿವಿದೆ. ಅರ್ಥೈಸಿದಷ್ಟೂ ಅರಿವಿನ ವಿಸ್ತಾರವಾದ ಹರವಿದೆ” ಅಂತಾರೆ ಕವಿ ಎ.ಎನ್.ರಮೇಶ್. ಗುಬ್ಬಿ ಅವರು!👇🍀
ಬೆಳಕು..!
ದೇವಸ್ಥಾನದ ಜಾಗ ನಿನ್ನಾಸ್ತಿಯಿರಬಹುದು
ದೇವಸ್ಥಾನವೂ ನಿನ್ನದೇ ಸ್ವತ್ತಿರಬಹುದು
ದೇವಸ್ಥಾನದೊಳಗಿನ ದೇವರು ನಿನ್ನ ಸ್ವತ್ತಲ್ಲ.!
ಮಠ ನಿನ್ನದೇ ಜಮೀನಿನಲ್ಲಿ ಕಟ್ಟಿಸಿರಬಹುದು
ಮಠದ ಸ್ವರ್ಣಪೀಠವೂ ನಿನ್ನ ಸ್ವತ್ತಿರಬಹುದು
ಪೀಠದ ಮೇಲೆ ಕುಳಿತ ಗುರು ನಿನ್ನ ತೊತ್ತಲ್ಲ ಸ್ವತ್ತಲ್ಲ.!
ಬೆಳಗುವ ಬೆಳ್ಳಿಯ ದೀಪ ನಿನ್ನದಿರಬಹುದು
ದೀಪದ ಒಳಗಣ ಬತ್ತಿ ತೈಲ ನಿನ್ನದೇ ಇರಬಹುದು
ದೀಪದ ಜ್ಯೋತಿಯ ಬೆಳಕು ನಿನ್ನ ತೊತ್ತಲ್ಲ ಸ್ವತ್ತಲ್ಲ.!
ಸ್ವಾರ್ಥ ತೊರೆದರಷ್ಟೇ ಪರಮಾರ್ಥದ ಸಾಕಾರ
ಅಹಮಿಕೆ ತೊಡೆದರಷ್ಟೇ ಅರಿವಿನ ಝೇಂಕಾರ
ಬದುಕು ಬಯಲಾದರಷ್ಟೇ ಬೆಳಕಿನ ಸಾಕ್ಷಾತ್ಕಾರ.!
-ಎ.ಎನ್.ರಮೇಶ್ ಗುಬ್ಬಿ, ಕೈಗಾ, ಕಾರವಾರ ಜಿ.
—–