ಹಂಬಲ
ಉಸಿರಾಡುತ್ತಿದ್ದೇನೆ ಈಗಲೂ ದಿನವೂ
ನೀನು ಉಸಿರಾಡುವ ಗಾಳಿಯನ್ನೇ ನಾನು
ಮಧ್ಯೆ ಇರುವ ನೂರಾರು ಮೈಲುಗಳ ಅಂತರ
ಕಳೆದು ಹೋದ ರಾತ್ರಿ ಬೆಳಗುಗಳ ಅರಿವಿಲ್ಲ
ಈಗಲೂ ಸಿಲುಕಿದ್ದೆನೆ, ನಿನ್ನ ಕಣ್ರೆಪ್ಪಗಳ ಮಧ್ಯೆ
ವರ್ಷಗಳಿಂದ ಹೆಪ್ಪುಗಟ್ಟಿದ ನೀರ ಹನಿಯಂತೆ
ಅತ್ತ ಒಳಗೂ ಇಂಗದೆ, ಇತ್ತ ಹೊರಗೂ ಜಾರದೆ
ಗಂಟೆಲೊಳಗೆ ಹೂತುಹೋದ ಹಳೇ ಹೆಸರಂತೆ
ಆದರೂ ಬಿಡದ ಹಂಬಲ , ಪ್ರತಿ ಬೆಳಗಿನಲ್ಲೂ
ಬಿಸಿಲು ಕೋಲಾಗಿ ಬಂದು ನಿನ್ನ ತಲೆ ನೇವರಿಸಿ
ರಾತ್ರಿ ಆಯಾಸದಿಂದ ಮಲಗಿರುವ ನಿನ್ನ ಪಾದ
ಒತ್ತುವ ಬಯಕೆಯ ಹರಕೆ ತೀರಿಲ್ಲ ನೋಡು !
ಸಾವಿರ ಸಾವಿರ ಆಪ್ತ ದ್ವನಿಗಳ ಮಧ್ಯೆಯೂ
ನಿನ್ನದೇ ಮಾತುಗಳ ಜಪದ್ವನಿ ಕಿವಿಯೊಳಗೆ
ಕಡಲಿನಲ್ಲರಸುವ, ಬೊಗಸೆ ಸಿಹಿ ನೀರಿನಂತೆ
ಕೈಕೊಡವಿಕೊಂಡಷ್ಟೂ ನೆನಪಿನ ಮರಳ ರಾಶಿ
ಮಿಡಿವ ಹೃದಯಕ್ಕೆ ಬೇರೆ ಬದುಕೇ ಗೊತ್ತಿಲ್ಲ ,
ನಿನ್ನಿಂದ ದೂರ ನಾ ಎಲ್ಲೇ ಕಳೆದುಹೋದರೂ ..
ಸುಮ್ಮನೆ ಕನಸಿಗಾದರೂ ಬಂದು ಸಾಂತ್ವನವಾಗಿಬಿಡು
ಹೆಚ್ಚೇನೂ ಬೇಕಿಲ್ಲ ಅಲ್ಲೂ ,ನಿನ್ನ ಕಿರುನಗೆಯ ಹೊರತು
-ರೂಪ ಗುರುರಾಜ್, ಬೆಂಗಳೂರು
(“ಸಪ್ತ ಸಾಗರದ ಆಚೆಯಲ್ಲೂ ಸೈಡ್ ಬಿ” ಗುಂಗಿನಲ್ಲಿ ಹುಟ್ಟಿದ ಸಾಲುಗಳು ….)
——-