ವಿಲಿಯಂ ಶೇಕ್ಸ್ ಪಿಯರ್ ಪ್ರಶಸ್ತಿಗೆ ಪ್ರೊ.ಅನಂತ್ ಎಲ್ ಝಂಡೇಕರ್ ಆಯ್ಕೆ

ಬಳ್ಳಾರಿ,ಡಿ.19:ಅಮೆರಿಕದ ನ್ಯೂ ಕ್ಯಾಸಲ್‍ನಲ್ಲಿರುವ ಯುಡೋಕ್ಸಿಯಾ ರಿಸರ್ಚ್ ಯುನಿವರ್ಸಿಟಿ ಮತ್ತು ಯುಡೋಕ್ಸಿಯಾ ರಿಸರ್ಚ್‍ಸೆಂಟರ್ ಇಂಡಿಯಾ, ಯುಡೋಕ್ಸಿಯಾ ಎಜ್ಯುಕೇಶನ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ನೀಡಲಾಗುವ ಪ್ರತಿಷ್ಠಿತ ರಾಯಲ್ ಗೋಲ್ಡನ್ ಫೆಲೋ ಮತ್ತು ರಾಯಲ್ ಗೋಲ್ಡನ್ ‘ವಿಲಿಯಂ ಶೇಕ್ಸ್‌ಪಿಯರ್’ ಪ್ರಶಸ್ತಿಗೆ 2023-24ನೇ ಸಾಲಿನ ವರ್ಷದ ವ್ಯಕ್ತಿಯಾಗಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿಗಳು ಹಾಗೂ ಇತಿಹಾಸ ಮತ್ತು ಪುರಾತತ್ವ ವಿಭಾಗದ ಪ್ರಾಧ್ಯಾಪಕರಾದ ಡಾ.ಅನಂತ್ ಎಲ್ ಝಂಡೇಕರ್ ಅವರು ಆಯ್ಕೆಯಾಗಿದ್ದಾರೆ.

ಈ ಪ್ರಶಸ್ತಿಯು ಶೈಕ್ಷಣಿಕ ಕ್ಷೇತ್ರದಲ್ಲಿ ಶೈಕ್ಷಣಿಕ ನಾಯಕತ್ವ ನಿರ್ವಹಣೆ ಮತ್ತು ಸಂಶೋಧನಾ ಕೊಡುಗೆಗಳ ಕ್ಷೇತ್ರದಲ್ಲಿನ ಅಪರಿಮಿತ ಸಾಧನೆಗಾಗಿ ನೀಡಲಾಗಿದೆ. ಫೆಲೋ ಆಫ್ ರಾಯಲ್ ಗೋಲ್ಡನ್ ಅಸೆಂಬ್ಲಿ ಆಫ್ ಯುಡೋಕ್ಸಿಯಾ ಲೈಫ್‍ಟೈಮ್ ಪ್ರಶಸ್ತಿ ಪ್ರದಾನ ಸಮಾರಂಭವು ಡಿ.28ರಂದು ಮುಂಬೈನ ಟಾಟಾ ವಿಶ್ವವಿದ್ಯಾಲಯದಲ್ಲಿ ನಡೆಯಲಿದೆ.
ಈ ಪ್ರಶಸ್ತಿಯು ವಿಶ್ವದಲ್ಲಿರುವ 198 ದೇಶಗಳ ಪೈಕಿ ಪ್ರತಿ ದೇಶದಿಂದ ಒಬ್ಬ ಪ್ರತಿನಿಧಿಗೆ ನೀಡಲಾಗುತ್ತದೆ. ಈ ಪ್ರಶಸ್ತಿಗೆ ಭಾರತ ದೇಶದಿಂದ ವಿಶ್ರೀಕೃ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಅನಂತ್ ಝಂಡೇಕರ್ ಅವರು ಭಾಜನರಾಗಿದ್ದಾರೆ.
ಮೂಲತಃ ಅಮೆರಿಕದ ಯುಡೋಕ್ಸಿಯಾ ಸಂಶೋಧನಾ ವಿಶ್ವವಿದ್ಯಾಲಯವು ತನ್ನ ಸಂಶೋಧನಾ ಮತ್ತು ಶೈಕ್ಷಣಿಕ ಶಾಖೆಗಳನ್ನು ಭಾರತದ ಮುಂಬೈ ಮತ್ತು ಗುವಾಹತಿಯಲ್ಲಿ ಹೊಂದಿದೆ.
‘ವಿಲಿಯಂ ಶೇಕ್ಸ್‍ಪಿಯರ್’ ಪ್ರಶಸ್ತಿಗೆ ಭಾಜನರಾದ ಡಾ.ಅನಂತ್ ಎಲ್ ಝಂಡೇಕರ್ ಅವರಿಗೆ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಆಡಳಿತ ವರ್ಗ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಶುಭ ಕೋರಿದ್ದಾರೆ ಎಂದು ವಿವಿ ಪ್ರಕಟಣೆ ತಿಳಿಸಿದೆ.
——-