ಗಾಂಧಿ ಟೋಪಿ
ಗಾಂಧೀಜಿ ಅಂದರೆ
ಕಾಗದದ ದೋಣಿಯಂಥ
ಒಂದು ಬಿಳಿ ಟೊಪ್ಪಿಗೆ
ಅಪ್ಪ ಅಜ್ಜ ಮಾವ
ಮತ್ತು
ಮಾಸ್ತರರ ತಲೆಯ
ಮೇಲಿರುತ್ತಿದ್ದ ನಮ್ಮ ಗಾಂಧೀಜಿ
ಬಡ ಮುದುಕಿಯ ಪಾಡು ನೋಡಿ
ಅಂಗಿ ತೊರೆದ ಗಾಂಧೀಜಿ,
ಒಂದೇ ಧೋತರ
ತಿರುವಿ ಮುರುವಿ ಉಟ್ಟು
ಹೆಗಲ ಮೇಲೆ ಸಾವಿನ
ಚುಂಗು ಹೊದ್ದುಕೊಂಡ
ಇತ್ತೀಚೆಗೆ,
ಸ್ವಾತಂತ್ರ್ಯೋತ್ಸವ ಬಲು ಜೋರು
ಗಾಂಧಿ ಟೊಪ್ಪಿಗೆ ಎಲ್ಲಿ ಕಳೆದು ಹೋಯಿತೊ
ಕಳುವಾದ ಟೊಪ್ಪಿಗೆಗಾಗಿ
ಪತ್ತೇದಾರಿ ಕಾರವಾಯಿ ತುರುಸಾಗಿದೆ
ಕಳ್ಳ ಸಿಕ್ಕಿಬಿದ್ದಿದ್ದಾನೆ
ಮಹಾಕಳ್ಳನ ಕೈಗೆ
ಇವತ್ತು,
ಹೃದಯದಲ್ಲಿರುವ ಗಾಂಧೀಜಿಗೆ ಬೇಡಿ
ಮೆದುಳಿನಲ್ಲಿರುವ ಗಾಂಧೀಜಿಗೆ ಗುಂಡು
ರಕ್ತದ ಕಣಕಣದಲ್ಲಿರುವ ಗಾಂಧೀಜಿಗೆ ವಿಷ
ಟೊಪ್ಪಿಗೆ ತೊಟ್ಟ
ಕೈದಿಗಳೆಲ್ಲ ಜೈಲಿನಿಂದ ಪರಾರಿಯಾಗಿ
ನಾನು ಗಾಂಧಿ
ನಾನು ಗಾಂಧಿ
ನಾನು ಗಾಂಧಿ
ಎನ್ನುತ್ತಿದ್ದಾರೆ.
ಎಲ್ಲಿ ಹುಡುಕುವುದು
ಗಾಂಧೀಜಿಯನ್ನು
ಯಾರು ತೊಟ್ಟಿರುವರು
ಆ ಟೊಪ್ಪಿಗೆಯನ್ನು
-ಭುವನಾ ಹಿರೇಮಠ, ಕಿತ್ತೂರು, ಬೆಳಗಾವಿ ಜಿ.
—–